ಇಂದು ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ನಡುವೆ ಎಲಿಮಿನೇಟರ್ ಕಾದಾಟ; ಗೆದ್ದವರಿಗೆ ಸೆಮೀಸ್ ಟಿಕೆಟ್

pro kabaddi web
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಲೀಗ್ ಹಂತದ 132 ಪಂದ್ಯಗಳನ್ನು ಯಶಸ್ವಿಯಾಗಿ ಮುಗಿಸಿರುವ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಇದೀಗ ಪ್ಲೇಆ್ ಸೆಣಸಾಟಕ್ಕೆ ಸಜ್ಜಾಗಿದೆ. ಕೊನೇಕ್ಷಣದಲ್ಲಿ ಪ್ಲೇಆಫ್​ ಪ್ರವೇಶ ಖಚಿತಪಡಿಸಿಕೊಂಡಿರುವ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಸೋಮವಾರ ನಡೆಯಲಿರುವ 2ನೇ ಎಲಿಮಿನೇಟರ್ ಕಾದಾಟದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ದಿನದ ಮೊದಲ ಎಲಿಮಿನೇಟರ್‌ನಲ್ಲಿ ಯುಪಿ ಯೋಧಾ ಮತ್ತು ಪುಣೇರಿ ಪಲ್ಟಾನ್ ತಂಡಗಳು ಮುಖಾಮುಖಿ ಆಗಲಿವೆ.

ಲೀಗ್‌ನಲ್ಲಿ ಆಡಿದ 22 ಪಂದ್ಯಗಳಲ್ಲಿ 11ರಲ್ಲಿ ಗೆದ್ದು, 9ರಲ್ಲಿ ಸೋತು, 2 ಟೈನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದ್ದ ಬೆಂಗಳೂರು ಬುಲ್ಸ್‌ಗೆ (66 ಅಂಕ) ನಾಯಕ ಪವನ್ ಶೆರಾವತ್ ಪ್ರಮುಖ ಬಲ ಆಗಿದ್ದಾರೆ. ಬುಲ್ಸ್ ತಂಡ ಟೂರ್ನಿಯ ಮೊದಲಾರ್ಧದಲ್ಲಿ ಬಲಿಷ್ಠ ನಿರ್ವಹಣೆ ತೋರಿದ್ದರೂ, ದ್ವಿತೀಯಾರ್ಧದಲ್ಲಿ ಲಯ ಕಳೆದುಕೊಂಡ ಕಾರಣ ಪ್ಲೇಆ್ಗೇರಲು ಪರದಾಡಿತ್ತು. ಮತ್ತೊಂದೆಡೆ ಗುಜರಾತ್ ಇದಕ್ಕೆ ವ್ಯತಿರಿಕ್ತವಾದ ಲಯ ತೋರಿತ್ತು. ಮೊದಲಾರ್ಧದಲ್ಲಿ ಪರದಾಡಿದ್ದರೂ, ನಂತರದ 11 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಗುಜರಾತ್ ಪ್ಲೇಆಫ್​ ಹಂತಕ್ಕೇರಿದೆ. ಜೈಂಟ್ಸ್ ಲೀಗ್‌ನಲ್ಲಿ ಆಡಿದ 22 ಪಂದ್ಯಗಳಲ್ಲಿ 10ರಲ್ಲಿ ಗೆದ್ದು, 8 ಸೋಲು, 4 ಟೈನೊಂದಿಗೆ 67 ಅಂಕ ಗಳಿಸಿ 4ನೇ ಸ್ಥಾನ ಪಡೆದಿತ್ತು. ಲೀಗ್ ಹಂತದ ಮುಖಾಮುಖಿಗಳಲ್ಲಿ ಬುಲ್ಸ್-ಜೈಂಟ್ಸ್ ತಲಾ 1ರಲ್ಲಿ ಜಯಿಸಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮೀಸ್‌ನಲ್ಲಿ 2ನೇ ಸ್ಥಾನಿ ದಬಾಂಗ್ ಡೆಲ್ಲಿ ತಂಡದ ಸವಾಲು ಎದುರಾಗಲಿದೆ.

ಟೂರ್ನಿಯ ದುಬಾರಿ ಆಟಗಾರ ಪ್ರದೀಪ್ ನರ್ವಾಲ್ ಒಳಗೊಂಡ ಯುಪಿ ಯೋಧಾ ತಂಡ ಲೀಗ್‌ನಲ್ಲಿ ಆಡಿದ 22 ಪಂದ್ಯಗಳಲ್ಲಿ 10ರಲ್ಲಿ ಗೆದ್ದು, 9 ಸೋಲು, 3 ಟೈನೊಂದಿಗೆ 68 ಅಂಕ ಗಳಿಸಿ 3ನೇ ಸ್ಥಾನ ಪಡೆದಿತ್ತು. ಪುಣೇರಿ ತಂಡ ಲೀಗ್‌ನಲ್ಲಿ 6ನೇ ಸ್ಥಾನ ಗಳಿಸಿದ್ದರೂ, ಆಡಿದ 22 ಪಂದ್ಯಗಳಲ್ಲಿ ಎಲಿಮಿನೇಟರ್‌ನಲ್ಲಿ ಆಡುತ್ತಿರುವ ಇತರ 3 ತಂಡಗಳಿಗಿಂತ ಅಧಿಕ ಅಂದರೆ 12 ಜಯ ಸಾಧಿಸಿತ್ತು. ಅಲ್ಲದೆ ಲೀಗ್ ಹಂತದಲ್ಲಿ ಯೋಧಾ ತಂಡವನ್ನೂ ಒಮ್ಮೆ ಮಣಿಸಿತ್ತು. ಹೀಗಾಗಿ ಮೊದಲ ಎಲಿಮಿನೇಟರ್ ಕೂಡ ಕುತೂಹಲಕಾರಿಯಾಗಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಬುಧವಾರದ ಮೊದಲ ಸೆಮಿಫೈನಲ್‌ನಲ್ಲಿ ಅಗ್ರಸ್ಥಾನಿ ಪಟನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ.

ಇಂದಿನ ಎಲಿಮಿನೇಟರ್ಸ್‌

ಯುಪಿ ಯೋಧಾ-ಪುಣೇರಿ ಪಲ್ಟಾನ್

ಆರಂಭ: ರಾತ್ರಿ 7.30

ಗುಜರಾತ್ ಜೈಂಟ್ಸ್-ಬೆಂಗಳೂರು ಬುಲ್ಸ್

ಆರಂಭ: ರಾತ್ರಿ 8.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net