ಈ ಬಾರಿ ಬದಲಾವಣೆ ಇಲ್ಲವೇ ಇಲ್ಲ... ಮದುವೆ ವಿಚಾರದಲ್ಲಿ ಆರ್‌ಸಿಬಿಗೆ ಶಾಕ್ ನೀಡಿದ ಮ್ಯಾಕ್ಸ್‌ವೆಲ್!

maxi web
Published on

ಬೆಂಗಳೂರು: ಮುಂದಿನ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ 15ನೇ ಆವೃತ್ತಿಯ ಆರಂಭಿಕ ಪಂದ್ಯಗಳಿಗೆ ಆರ್‌ಸಿಬಿ ತಂಡಕ್ಕೆ ಅಲಭ್ಯರಾಗಲಿದ್ದಾರೆ.

ಆರ್‌ಸಿಬಿ ತಂಡದಲ್ಲಿ 11 ಕೋಟಿ ರೂ.ಗೆ ರಿಟೇನ್ ಆಗಿರುವ ಮ್ಯಾಕ್ಸ್‌ವೆಲ್, ಮಾರ್ಚ್ 27ರಂದು ಮೆಲ್ಬೋರ್ನ್‌ನಲ್ಲಿ ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರನ್ನು ತಮಿಳು ಬ್ರಾಹ್ಮಣ ಸಂಪ್ರದಾಯ ಪ್ರಕಾರ ವಿವಾಹವಾಗಲಿದ್ದಾರೆ. ಕ್ರಿಶ್ಚಿಯನ್ ಪದ್ಧತಿ ಪ್ರಕಾರವೂ ವಿವಾಹ ಸಮಾರಂಭ ನಡೆಯಲಿದ್ದು, ಈ ಒಟ್ಟಾರೆ ಒಂದು ವಾರದ ಕಾರ್ಯಕ್ರಮ ಇದಾಗಿರಲಿದೆ.

ಇತ್ತ ಐಪಿಎಲ್ ಟೂರ್ನಿಯೂ ಮಾರ್ಚ್ ಕೊನೇ ವಾರದಲ್ಲಿ ಅಂದರೆ ಬಹುತೇಕ ಅವರ ವಿವಾಹ ದಿನವಾದ ಮಾರ್ಚ್ 27ರಂದೇ ಆರಂಭಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಮ್ಯಾಕ್ಸ್‌ವೆಲ್ ವಿವಾಹ ಸಮಾರಂಭ ಮುಗಿಸಿ ಭಾರತಕ್ಕೆ ಬಂದು ಕ್ವಾರಂಟೈನ್ ಆಗಿ ಐಪಿಎಲ್ ಟೂರ್ನಿಯ ಬಯೋಬಬಲ್ ಸೇರಿಕೊಳ್ಳುವಷ್ಟರಲ್ಲಿ ಆರ್‌ಸಿಬಿ ತಂಡ 2-3 ಲೀಗ್ ಪಂದ್ಯ ಆಡಿರುತ್ತದೆ. ಮಾರ್ಚ್‌ನಲ್ಲಿ ನಡೆಯಲಿರುವ ಆಸೀಸ್ ತಂಡದ ಪಾಕಿಸ್ತಾನ ಪ್ರವಾಸಕ್ಕೂ ಮ್ಯಾಕ್ಸ್‌ವೆಲ್ ಅಲಭ್ಯರಾಗಲಿದ್ದಾರೆ.

2020ರ ಮಾರ್ಚ್‌ನಲ್ಲಿ ಚೆನ್ನೈ ಮೂಲದ ವಿನಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್, ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಈಗಾಗಲೆ ಕೆಲ ಬಾರಿ ವಿವಾಹವನ್ನು ಮುಂದೂಡಿದ್ದು, ಈ ಬಾರಿ ದಿನಾಂಕ ಬದಲಾವಣೆಗೆ ಸಿದ್ಧರಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net