

ಮುಂಬೈ: ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದ ಪುಣೇರಿ ಪಲ್ಟಾನ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸತತ 7ನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪುಣೇರಿ ತಂಡ ಭಾನುವಾರದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು 29-26 ಅಂತರದಿಂದ ಪರಾಭವಗೊಳಿಸಿತು.
ಮುಂಬೈ ಚರಣದ 3ನೇ ದಿನದ ಮೊದಲ ಪಂದ್ಯದ ಮೊದಲಾರ್ಧದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಅಂತಿಮವಾಗಿ ಪುಣೇರಿ 12-11ರಿಂದ ಅಲ್ಪ ಮುನ್ನಡೆ ಸಾಧಿಸಿತು. ದ್ವೀತಿಯಾರ್ಧದಲ್ಲಿ ತಲೈವಾಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸುವ ಮೂಲಕ ಪುಣೇರಿ ತಂಡ ಮುನ್ನಡೆಯನ್ನು ಹಿಗ್ಗಿಸಿಕೊಂಡಿತು. ಟ್ಯಾಕಲಿಂಗ್ನಲ್ಲಿ ತಲೈವಾಸ್ ತಂಡ ದಿಟ್ಟ ಪ್ರತಿರೋಧ ತೋರಿದರೂ, ಪುಣೇರಿ ತಂಡ ಕೊನೆಯವರೆಗೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಪುಣೇರಿ ತಂಡಕ್ಕೆ ಇದು ಆಡಿದ 10 ಪಂದ್ಯಗಳಲ್ಲಿ 9ನೇ ಗೆಲುವಾಗಿದೆ. ತಲೈವಾಸ್ ತಂಡಕ್ಕೆ ಇದು 10 ಪಂದ್ಯಗಳಲ್ಲಿ 8ನೇ ಸೋಲಾಗಿದ್ದು, ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಹರಿಯಾಣಕ್ಕೆ ಮಣಿದ ಬೆಂಗಾಲ್: ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 41-35ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಹರಿಯಾಣ ಸ್ಟೀಲರ್ಸ್ ತಂಡಕ್ಕೆ ಇದು ಆಡಿದ 10 ಪಂದ್ಯಗಳಲ್ಲಿ 6ನೇ ಗೆಲುವಾಗಿದೆ.