ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ಆರಂಭ ದಿನಾಂಕ ಪ್ರಕಟ, 12 ನಗರಗಳಲ್ಲಿ ಪಂದ್ಯಗಳು

pkl web
Published on

ಬೆಂಗಳೂರು: ಭಾರತದಲ್ಲಿ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ನಂತರದಲ್ಲಿ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಗೆ ಚಾಲನೆ ದೊರೆಯುವ ನಿರೀಕ್ಷೆ ನಿಜವಾಗಿದೆ. ಡಿಸೆಂಬರ್​ 2ರಂದು ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿ ಆರಂಭಗೊಳ್ಳಲಿದೆ ಎಂದು ಟೂರ್ನಿಯ ಸಂಘಟಕ ಮಶಾಲ್​ ಸ್ಪೋರ್ಟ್ಸ್​ ಗುರುವಾರ ಘೋಷಿಸಿದೆ. ಜತೆಗೆ ಈ ಹಿಂದೆ ಕ್ಯಾರವಾನ್​ ಮಾದರಿಯಲ್ಲೇ ಟೂರ್ನಿಯ ಪಂದ್ಯಗಳು ದೇಶದ 12 ನಗರಗಳಿಗೆ ವಿಸ್ತರಿಸುವುದು ಕೂಡ ಖಚಿತಗೊಂಡಿದೆ. ಇದರಿಂದ ಟೂರ್ನಿಯಲ್ಲಿ ಆಡುವ ಎಲ್ಲ 12 ತಂಡಗಳ ತವರಿನ ಪ್ರೇಕ್ಷಕರೂ ತಮ್ಮ ನೆಚ್ಚಿನ ತಂಡಗಳ ಆಟವನ್ನು ಆನಂದಿಸಬಹುದಾಗಿದೆ.

ಟೂರ್ನಿಗೆ ಪೂರ್ವಭಾವಿಯಾಗಿ ಸೆಪ್ಟೆಂಬರ್​ 8-9ರಂದು ಮುಂಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಿಗದಿಯಾಗಿದೆ. ಭಾರತೀಯ ಅಮೆಚೂರ್​ ಕಬಡ್ಡಿ ಒಕ್ಕೂಟದ (ಎಕೆಎಫ್​ಐ) ಮಾನ್ಯತೆಯೊಂದಿಗೆ ಮಶಾಲ್​ ಸ್ಪೋರ್ಟ್ಸ್​ ಮತ್ತು ಡಿಸ್ನಿ&ಸ್ಟಾರ್​ ಜತೆಗೂಡಿ ಪ್ರೊ ಕಬಡ್ಡಿ ಲೀಗ್​ ಟೂರ್ನಿಯನ್ನು ಕಳೆದ 9 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸುತ್ತ ಬಂದಿದೆ. ಕರೊನಾ ಭೀತಿಯಿಂದಾಗಿ 2020ರಲ್ಲಿ ಟೂರ್ನಿ ನಡೆದಿರಲಿಲ್ಲ. 2021ರಲ್ಲಿ ಸಂಪೂರ್ಣ ಟೂರ್ನಿ ಬೆಂಗಳೂರಿನಲ್ಲೇ ಆಯೋಜನೆಗೊಂಡಿದ್ದರೆ, 2022ರಲ್ಲಿ ಬೆಂಗಳೂರಿನ ಜತೆಗೆ ಪುಣೆ ಮತ್ತು ಹೈದರಾಬಾದ್​ನಲ್ಲಿ ಮಾತ್ರ ಪಂದ್ಯಗಳು ನಡೆದಿದ್ದವು. 2019ರ ನಂತರ ಮೊದಲ ಬಾರಿಗೆ ಟೂರ್ನಿ ಕ್ಯಾರವಾನ್​ ಮಾದರಿಗೆ ಮರಳುತ್ತಿದೆ.

'ದೇಶದೆಲ್ಲೆಡೆ ಜನರು ನೋಡಲು ಮತ್ತು ಆಡಲು ಬಯಸುವ ಕ್ರೀಡೆಯಾಗಿ ಕಬಡ್ಡಿ ಆಟ ಬೆಳೆದಿದೆ. ಪ್ರೊ ಕಬಡ್ಡಿ ಲೀಗ್​ನ ಕಳೆದ 9 ವರ್ಷಗಳ ಯಶಸ್ಸು ಇದಕ್ಕೆ ಪುಷ್ಠಿ ಎನಿಸಿದೆ. ಇದೀಗ 10ನೇ ಆವೃತ್ತಿಯೊಂದಿಗೆ ಕಬಡ್ಡಿ ಆಟ ಇನ್ನಷ್ಟು ಬೆಳವಣಿಗೆ ಕಾಣುವತ್ತ ಮುನ್ನಡೆಯುತ್ತಿದೆ' ಎಂದು ಮಶಾಲ್​ ಸ್ಪೋರ್ಟ್ಸ್​ನ ಕ್ರೀಡಾ ಲೀಗ್​ ಮುಖ್ಯಸ್ಥ ಹಾಗೂ ಲೀಗ್​ ಆಯುಕ್ತ ಅನುಪಮ್​ ಗೋಸ್ವಾಮಿ ತಿಳಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್​ಗೆ ಮುನ್ನ ಭಾರತದ ಪ್ರಮುಖ ಕಬಡ್ಡಿ ಆಟಗಾರರು ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರವರೆಗೆ ಚೀನಾದಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net