

ಡಬ್ಲಿನ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 11ನೇ ನಾಯಕ ಎನಿಸಲು ವೇಗಿ ಜಸ್ಪ್ರೀತ್ ಬುಮ್ರಾ ಸಜ್ಜಾಗಿದ್ದಾರೆ. ಆತಿಥೇಯ ಐರ್ಲೆಂಡ್ ವಿರುದ್ಧ ಶುಕ್ರವಾರದಿಂದ ನಡೆಯಲಿರುವ ಟಿ20 ಸರಣಿಯಲ್ಲಿ ಬುಮ್ರಾ ಈ ಮೈಲಿಗಲ್ಲು ನೆಡಲಿದ್ದಾರೆ. ಇದೇ ವೇಳೆ, ಬುಮ್ರಾ ಟೀಮ್ ಇಂಡಿಯಾದ ನೆಟ್ಸ್ನಲ್ಲಿ 11 ತಿಂಗಳ ಬಳಿಕ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಬುಮ್ರಾರ ಯಾರ್ಕರ್ ಎಸೆತಗಳ ವಿಡಿಯೋವನ್ನು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಮಂಗಳವಾರವಷ್ಟೇ ಐರ್ಲೆಂಡ್ ತಲುಪಿರುವ ಭಾರತ ತಂಡ ಬುಧವಾರ ಅಭ್ಯಾಸ ಆರಂಭಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ 25ರಂದು ಹೈದರಾಬಾದ್ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದ 29 ವರ್ಷದ ಬುಮ್ರಾ ನಂತರದಲ್ಲಿ ಬೆನ್ನುನೋವಿನ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಇದರಿಂದಾಗಿ ಅವರು ಟಿ20 ಏಷ್ಯಾಕಪ್, ಟಿ20 ವಿಶ್ವಕಪ್, ಆಸ್ಟ್ರೆಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿ, ಐಪಿಎಲ್-16, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಂಥ ಮಹತ್ವದ ಟೂರ್ನಿ-ಸರಣಿಗಳನ್ನು ತಪ್ಪಿಸಿಕೊಂಡಿದ್ದರು.
ಏಕದಿನ ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಮುನ್ನ ಫಿಟ್ನೆಸ್ ಸಾಬೀತುಪಡಿಸಲು ಐರ್ಲೆಂಡ್ ವಿರುದ್ಧದ ಸರಣಿ ಬುಮ್ರಾಗೆ ಮಹತ್ವದ ಅವಕಾಶವೆನಿಸಿದೆ. ಜತೆಗೆ ನಾಯಕತ್ವ ಜವಾಬ್ದಾರಿಯೂ ಅವರ ಹೆಗಲೇರಿದೆ. ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಭಾರತ ತಂಡವನ್ನು ಈ ಮುನ್ನ ಟಿ20 ಕ್ರಿಕೆಟ್ನಲ್ಲಿ ಮುನ್ನಡೆಸಿರುವ ನಾಯಕರಾಗಿದ್ದಾರೆ.