

ಬೆಂಗಳೂರು: ಕಾರು ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿ ಇದೀಗ ಚೇತರಿಕೆಯ ಹಾದಿಯಲ್ಲಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಸಕಾರಾತ್ಮಕ ಸೂಚನೆಯನ್ನು ರವಾನಿಸಿರುವ ರಿಷಭ್ ಪಂತ್, ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಮರಳಿ ಕಣಕ್ಕಿಳಿಯುವ ಗುರಿಯನ್ನು ಹೊಂದಿದ್ದಾರೆ.
ಕಳೆದ ವರ್ಷಾಂತ್ಯದಲ್ಲಿ ಡೆಹ್ರಾಡೂನ್-ದೆಹಲಿ ನಡುವಿನ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಂತ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಆದರೆ ಅವರಿಗೆ ಹಲವು ಗಾಯಗಳಾಗಿದ್ದವು. ಈ ಪೈಕಿ ಬಲಮೊಣಕಾಲಿನ ಗಾಯ ಗಂಭೀರವಾಗಿತ್ತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಕೆ ಕಾಣುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಜೆಎಸ್ಡಬ್ಲ್ಯು ಫೌಂಡೇಷನ್ ವತಿಯಿಂದ ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ 25 ವರ್ಷದ ಪಂತ್, ನಂತರ ಸೌಹಾರ್ದ ಪಂದ್ಯದಲ್ಲಿ ಬ್ಯಾಟಿಂಗ್ಗೂ ಇಳಿದರು. ಕೆಲ ಎಸೆತಗಳನ್ನು ಎದುರಿಸಿದ ಪಂತ್, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು. ಐಪಿಎಲ್ನಲ್ಲಿ ಪಂತ್ ನಾಯಕರಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜೆಎಸ್ಡಬ್ಲ್ಯು ಗ್ರೂಪ್ ಸಹ-ಮಾಲೀಕನಾಗಿದೆ.
ರಿಷಭ್ ಪಂತ್ ಈಗಾಗಲೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ ಎಂದು ಬಿಸಿಸಿಐ ಕಳೆದ ತಿಂಗಳೇ ಅವರ ಫಿಟ್ನೆಸ್ ಬಗ್ಗೆ ತಾಜಾ ಮಾಹಿತಿಯನ್ನು ಒದಗಿಸಿತ್ತು. ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 5 ಪಂದ್ಯಗಳನ್ನು ಆಡಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 3ನೇ ಆವೃತ್ತಿಯಲ್ಲಿ ಇದು ಮಹತ್ವದ ಸರಣಿಯಾಗಿದೆ. ಇದಕ್ಕೆ ಮುನ್ನ ಏಷ್ಯಾಕಪ್-ವಿಶ್ವಕಪ್ ಮತ್ತು ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರಿಷಭ್ ಪಂತ್ ತಪ್ಪಿಸಿಕೊಳ್ಳಲಿದ್ದಾರೆ. ಜನವರಿ 5ರಂದು ಆರಂಭಗೊಳ್ಳಲಿರುವ ರಣಜಿ ಟ್ರೋಫಿ, ಪಂತ್ಗೆ ಫಿಟ್ನೆಸ್ ಸಾಬೀತುಪಡಿಸಲು ಪ್ರಮುಖ ವೇದಿಕೆ ಎನಿಸಲಿದೆ.
ಕ್ರೀಡೆಯನ್ನು ಆನಂದಿಸಿ
ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಪಂತ್, ಕ್ರೀಡೆಯನ್ನು ಆನಂದಿಸಲು ಕರೆ ನೀಡಿದರು. 'ನೀವು ದೊಡ್ಡವರಾಗಿ ಬೆಳಯಲಾರಂಭಿಸುತ್ತಿದ್ದಂತೆ, ಕ್ರೀಡೆಯನ್ನು ಆನಂದಿಸುವುದನ್ನು ನಿಲ್ಲಿಸುತ್ತೀರಿ. ಜೀವನದಲ್ಲಿ ಎದುರಾಗುವ ಒತ್ತಡಗಳು ಅದಕ್ಕೊಂದು ಕಾರಣ. ಜೀವನದಲ್ಲಿ ಯಶಸ್ಸು ಕಾಣುವ ಸಲುವಾಗಿ ಕ್ರೀಡೆಯಿಂದ ದೂರ ಉಳಿಯುತ್ತೀರಿ. ಆದರೆ ಜೀವನದಲ್ಲಿ ಯಾವತ್ತೂ ಆನಂದವನ್ನು ಮಿಸ್ ಮಾಡಿಕೊಳ್ಳಬಾರದು' ಎಂದು ಪಂತ್ ಹೇಳಿದ್ದಾರೆ.