

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ 2009ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ (ಆಗ ಡೆಲ್ಲಿ ಡೇರ್ಡೆವಿಲ್ಸ್) ಭಾರಿ ನಷ್ಟ ಅನುಭವಿಸಿ ತತ್ತರಿಸಿದಾಗ ಅದಕ್ಕೆ ಈ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಿದ್ದರು! ಹಿರಿಯ ಕ್ರಿಕೆಟ್ ಆಡಳಿತಾಧಿಕಾರಿ ಅಮೃತ್ ಮಾಥೂರ್ ಬರೆದಿರುವ ಜೀವನಚರಿತ್ರೆ 'ಪಿಚ್ಸೈಡ್: ಮೈ ಲೈಫ್ ಇನ್ ಇಂಡಿಯನ್ ಕ್ರಿಕೆಟ್' ಪುಸ್ತಕದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಐಪಿಎಲ್ ಶುರುವಾದಾಗ ಅಕ್ಷಯ್ ಕುಮಾರ್ ಅವರು ಡೆಲ್ಲಿ ತಂಡದ ಪ್ರಚಾರ ರಾಯಭಾರಿಯಾಗಿ ಅದರೊಂದಿಗೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಇದರಂತೆ ಅದರ ಪ್ರಚಾರ ವಿಡಿಯೋ, ಸಮಾರಂಭಗಳಲ್ಲಿ ಭಾಗವಹಿಸುವ ಒಪ್ಪಂದಕ್ಕೂ ಸಹಿ ಹಾಕಿದ್ದರು. ಇದರನ್ವಯ ಅಕ್ಷಯ್ ಕುಮಾರ್ ಐಪಿಎಲ್ ಟೂರ್ನಿಯ ವೇಳೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅಪಾಯಕಾರಿ ಸ್ಟಂಟ್ ಕೂಡ ಪ್ರದರ್ಶಿಸಿದ್ದರು. ಇದು ಡೆಲ್ಲಿ ತಂಡಕ್ಕೆ ಉತ್ತಮ ಪ್ರಚಾರ ತಂದುಕೊಟ್ಟರೂ, ತಂಡದ ಒಟ್ಟಾರೆ ಆರ್ಥಿಕ ವ್ಯವಹಾರದ ಮೇಲೆ ಹೊಡೆತ ನೀಡಿತ್ತು. ಅಕ್ಷಯ್ ಕುಮಾರ್ ಜತೆಗಿನ ಅದರ ಒಪ್ಪಂದ ಆರ್ಥಿಕವಾಗಿ ಭಾರಿ ಹೊರೆ ಎನಿಸಿತು. ಆದರೆ ತಕ್ಷಣವೇ ಒಪ್ಪಂದದಿಂದ ಹೊರಬರುವುದು ಕೂಡ ಅದಕ್ಕೆ ಅಸಾಧ್ಯವೆನಿಸಿತ್ತು.
ಒಪ್ಪಂದ ಮುರಿದುಕೊಳ್ಳುವ ಕುರಿತು ಅಕ್ಷಯ್ ಕುಮಾರ್ ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರಿಗಳು ಮತ್ತು ವಕೀಲರ ಜತೆಗೆ ಡೆಲ್ಲಿ ತಂಡದ ಅಧಿಕಾರಿಗಳು ಚರ್ಚಿಸಿದರು. ಆದರೆ ಒಪ್ಪಂದದ ಅನ್ವಯ ಈ ಒಪ್ಪಂದವನ್ನು ಡೆಲ್ಲಿ ತಂಡ ಮುರಿದುಕೊಂಡರೂ, ಅಕ್ಷರ್ ಕುಮಾರ್ಗೆ 3 ವರ್ಷಗಳ ಅವಧಿಗೆ ನೀಡಬೇಕಾದ ಮೊತ್ತವನ್ನು ಪಾವತಿಸಲೇಬೇಕಾಗಿತ್ತು. ಹೀಗಾಗಿ ಈ ಬಗ್ಗೆ ಚರ್ಚಿಸಲು ಅಮೃತ್ ಮಾಥೂರ್ ಅವರ ಮಧ್ಯಸ್ಥಿಕೆಯಲ್ಲಿ ಡೆಲ್ಲಿ ತಂಡದ ಅಧಿಕಾರಿಗಳು ತೆರಳಿದ್ದರು.
ಚಾಂದಿನಿ ಚೌಕ್ ಟು ಚೀನಾ ಸಿನಿಮಾದ ಚಿತ್ರೀಕರಣದ ವೇಳೆ ಅಕ್ಷಯ್ ಕುಮಾರ್ ಅವರನ್ನು ಡೆಲ್ಲಿ ತಂಡದ ಅಧಿಕಾರಿಗಳು ಭೇಟಿಯಾಗಿ, ತಂಡ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ತಿಳಿಸಿದರು. ಆಗ ಅಕ್ಷಯ್ ಕುಮಾರ್ ಹಿಂದೆಮುಂದೆ ಆಲೋಚಿಸದೆ, ಒಪ್ಪಂದವನ್ನು ಮುರಿದುಕೊಳ್ಳೋಣ ಎಂದರು. ಇಲ್ಲ ಹಾಗೆ ಮಾಡಿದರೂ, ಒಪ್ಪಂದದ ಅನ್ವಯ ನಿಮಗೆ ನೀಡಬೇಕಾದ ಮೊತ್ತವನ್ನು ನೀಡಲೇಬೇಕಾಗುತ್ತದೆ ಎಂದು ಮಾಥೂರ್ ವಿವರಿಸಿದರು. ಆಗಲೂ ತಲೆಕೆಡಿಸಿಕೊಳ್ಳದ ಅಕ್ಷಯ್ ಕುಮಾರ್, ನೀವೇನೂ ನೀಡಬೇಕಾಗಿಲ್ಲ, ನಾನು ಈ ಬಗ್ಗೆ ನನ್ನ ವಕೀಲರಿಗೆ ಸೂಚನೆ ನೀಡುತ್ತೇನೆ ಎಂದರು. ಇದರಿಂದ ಡೆಲ್ಲಿ ತಂಡ ಆಗಿನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಯಿತು. ಆದರೆ ಅಕ್ಷರ್ ಕುಮಾರ್ ಅಷ್ಟು ದೊಡ್ಡ ಮೊತ್ತವನ್ನು ಬಿಟ್ಟುಕೊಟ್ಟ ಬಗ್ಗೆ ನನಗೆ ಈಗಲೂ ಅಚ್ಚರಿಯಾಗುತ್ತಿದೆ ಎಂದು ಮಾಥೂರ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.