ಇಂದಿನಿಂದ ಪಿಂಕ್​ಬಾಲ್​ ಅಭ್ಯಾಸ; ಬ್ಯಾಟಿಂಗ್​ ಕಾಂಬಿನೇಷನ್​ ಅಂತಿಮಗೊಳಿಸುವುದು ಭಾರತದ ಗುರಿ

web practice
Published on

ಕ್ಯಾನ್​ಬೆರಾ: ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಎರಡನೇ ಪಂದ್ಯ ಅಡಿಲೇಡ್​ನಲ್ಲಿ ಅಹರ್ನಿಶಿಯಾಗಿ ನಡೆಯಲಿರುವುದರಿಂದ ಅದಕ್ಕೆ ಪೂರ್ವಸಿದ್ಧತೆಯಾಗಿ ಎರಡು ದಿನಗಳ ಪಿಂಕ್​ಬಾಲ್​ ಅಭ್ಯಾಸ ಪಂದ್ಯವನ್ನು ಆಡಲು ಭಾರತ ತಂಡ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ಮನುಕಾ ಓವಲ್​ ಮೈದಾನದಲ್ಲಿ ಆಸ್ಟ್ರೆಲಿಯಾ ಪ್ರಧಾನಿ ಇಲೆವೆಲ್​ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ, ಅಡಿಲೇಡ್​ ಟೆಸ್ಟ್​ಗೆ ಬ್ಯಾಟಿಂಗ್​ ಸಂಯೋಜನೆ ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.

ಭಾರತ ತಂಡ ಕಳೆದ 4 ವರ್ಷಗಳಿಂದ ಅಹರ್ನಿಶಿ ಟೆಸ್ಟ್​ ಪಂದ್ಯ ಆಡಿಲ್ಲ. 2020ರಲ್ಲಿ ಅಡಿಲೇಡ್​ನಲ್ಲೇ ಕೊನೆಯದಾಗಿ ಪಿಂಕ್​ಬಾಲ್​ನಲ್ಲಿ ಟೆಸ್ಟ್​ ಆಡಿರುವ ಭಾರತ ಆಗ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ 3 ದಿನದೊಳಗೆ ಸೋಲು ಕಂಡಿತ್ತು. ಇದೀಗ ಭಾರತ ತಂಡದ ಹೆಚ್ಚಿನ ಬ್ಯಾಟರ್​ಗಳು ಪಿಂಕ್​ಬಾಲ್​ನಲ್ಲಿ ಮೊದಲ ಬಾರಿ ಅಭ್ಯಾಸ ನಡೆಸಲಿದ್ದಾರೆ.

ಪರ್ತ್​ ಟೆಸ್ಟ್​ನಲ್ಲಿ 295 ರನ್​ಗಳ ಬೃಹತ್​ ಅಂತರದಿಂದ ಗೆದ್ದಿರುವ ಭಾರತ, ಅಡಿಲೇಡ್​ನಲ್ಲೂ ಮೇಲುಗೈ ಮುಂದುವರಿಸುವ ಉತ್ಸಾಹದಲ್ಲಿದೆ. ಆದರೆ, 2015ರಿಂದ ಅಡಿಲೇಡ್​ನಲ್ಲಿ ಆಡಿರುವ ಎಲ್ಲ 7 ಟೆಸ್ಟ್​ಗಳಲ್ಲೂ ಗೆದ್ದಿರುವ ಆಸ್ಟ್ರೆಲಿಯಾದ ಅಜೇಯ ಓಟಕ್ಕೆ ತಡೆಯೊಡ್ಡುವುದು ಸುಲಭದ ಸವಾಲಲ್ಲ.

ಜಾಕ್​ ಎಡ್ವರ್ಡ್ಸ್​ ಸಾರಥ್ಯದ ಆತಿಥೇಯ ಪ್ರಧಾನಿ ಇಲೆವೆನ್​ ತಂಡ ಆಸೀಸ್​ ಟೆಸ್ಟ್​ ಆಟಗಾರರಾದ ಮ್ಯಾಟ್​ ರೆನ್​ಷಾ ಮತ್ತು ವೇಗಿ ಸ್ಕಾಟ್​ ಬೋಲ್ಯಾಂಡ್​ರಂಥ ಅನುಭವಿಗಳಿಂದ ಕೂಡಿದೆ. ಆಸೀಸ್​ 19 ವಯೋಮಿತಿ ತಂಡದ ಚಾರ್ಲಿ ಆಂಡರ್​ಸನ್​, ಮಹ್ಲಿ ಬಿಯರ್ಡ್​ಮನ್​, ಏಡನ್​ ಓಕಾನರ್​ ಮತ್ತು ಸ್ಯಾಮ್​ ಕಾನ್​ಸ್ಟಾಟ್​ರಂಥ ಯುವ ಆಟಗಾರರನ್ನೂ ಒಳಗೊಂಡಿದೆ.

ತಂಡಗಳು:

ಭಾರತ: ರೋಹಿತ್​ ಶರ್ಮ (ನಾಯಕ), ಜಸ್​ಪ್ರೀತ್​ ಬುಮ್ರಾ, ಯಶಸ್ವಿ ಜೈಸ್ವಾಲ್​, ಅಭಿಮನ್ಯು ಈಶ್ವರನ್​, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​, ರಿಷಭ್​ ಪಂತ್​, ಸ್ರಾರ್ಜ್​ ಖಾನ್​, ಧ್ರುವ ಜುರೆಲ್​, ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಮೊಹಮದ್​ ಸಿರಾಜ್​, ಆಕಾಶ್​ದೀಪ್​, ಪ್ರಸಿದ್ಧಕೃಷ್ಣ, ಹರ್ಷಿತ್​ ರಾಣಾ, ನಿತೀಶ್​ ಕುಮಾರ್​ ರೆಡ್ಡಿ, ವಾಷಿಂಗ್ಟನ್​ ಸುಂದರ್​.

ಪ್ರಧಾನಿ ಇಲೆವೆನ್​: ಜಾಕ್​ ಎಡ್ವರ್ಡ್ಸ್​ (ನಾಯಕ), ಚಾರ್ಲಿ ಆಂಡರ್​ಸನ್​, ಮಹ್ಲಿ ಬಿಯರ್ಡ್​ಮನ್​, ಸ್ಕಾಟ್​ ಬೋಲ್ಯಾಂಡ್​, ಜಾಕ್​ ಕ್ಲಿಂಟನ್​, ಐಡನ್​ ಓಕಾನರ್​, ಒಲಿ ಡೇವಿಸ್​, ಜೇಡನ್​ ಗುಡ್​ವಿನ್​, ಸ್ಯಾಮ್​ ಹಾರ್ಪರ್​, ಹ್ಯಾನೊ ಜೇಕಬ್ಸ್​, ಸ್ಯಾಮ್​ ಕಾನ್​ಸ್ಟಾಸ್​, ಲಾಯ್ಡ್​ ಪೋಪ್​, ಮ್ಯಾಥ್ಯೂ ರೇನ್​ಷಾ, ಜೆಮ್​ ರ್ಯಾನ್​.

*ಆರಂಭ: ಬೆಳಗ್ಗೆ 9.10

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​.

ಬ್ಯಾಟಿಂಗ್​ ಕ್ರಮಾಂಕ ನಿರ್ಧಾರ

ನಾಯಕ ರೋಹಿತ್​ ಶರ್ಮ ವಾಪಸಾತಿ ಮತ್ತು ಶುಭಮಾನ್​ ಗಿಲ್​ 2ನೇ ಟೆಸ್ಟ್​ಗೆ ಫಿಟ್​ ಆಗುವ ನಿರೀೆ ಇರುವುದು ಭಾರತಕ್ಕೆ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ದೊಡ್ಡ ಗೊಂದಲ ತಂದಿದೆ. ದೇವದತ್​ ಪಡಿಕ್ಕಲ್​ ಮತ್ತು ಧ್ರುವ ಜುರೆಲ್​ರನ್ನು ಕೈಬಿಟ್ಟು ಆಡುವ 11ರ ಬಳಗದಲ್ಲಿ ಇವರಿಬ್ಬರಿಗೆ ಸುಲಭವಾಗಿ ಸ್ಥಾನ ಕಲ್ಪಿಸಬಹುದಾಗಿದೆ. ಆದರೆ ಕೆಎಲ್​ ರಾಹುಲ್​ ಪರ್ತ್​ ಟೆಸ್ಟ್​ನಲ್ಲಿ ಮಿಂಚಿರುವುದರಿಂದ ಇವರಿಬ್ಬರ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಯಶಸ್ವಿ ಜೈಸ್ವಾಲ್​ ಜತೆ ರಾಹುಲ್​ರನ್ನೇ ಆರಂಭಿಕರಾಗಿ ಆಡಿಸುವುದೇ, ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದೇ ಅಥವಾ ರೋಹಿತ್​ರಿಂದ ಇನಿಂಗ್ಸ್​ ಆರಂಭಿಸುವುದೇ, ಮಧ್ಯಮ ಕ್ರಮಾಂಕಕ್ಕೆ ಇಳಿಸುವುದೇ ಅಥವಾ ಶುಭಮಾನ್​ ಗಿಲ್​ರನ್ನು 3ನೇ ಕ್ರಮಾಂಕದಿಂದ 5ನೇ ಕ್ರಮಾಂಕಕ್ಕೆ ಇಳಿಸಿ, ರಾಹುಲ್​ರನ್ನು 3ನೇ ಕ್ರಮಾಂಕದಲ್ಲಿ ಆಡುವುದೇ ಎಂಬಿತ್ಯಾದಿ ಗೊಂದಲಗಳಿವೆ. ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ಈ ಮೂವರ ಕ್ರಮಾಂಕದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ.

ಪ್ರಥಮ ದರ್ಜೆ ಪಂದ್ಯವಲ್ಲ

ಪಿಂಕ್​ ಕೂಕಬುರಾ ಚೆಂಡಿನಲ್ಲಿ ಆಡಲಾಗುವ ದ್ವಿದಿನ ಅಭ್ಯಾಸ ಪಂದ್ಯ ಪ್ರಥಮ ದರ್ಜೆ ಪಂದ್ಯದ ಮಾನ್ಯತೆ ಹೊಂದಿರುವುದಿಲ್ಲ. ಹೀಗಾಗಿ ತಂಡದ ಎಲ್ಲರೂ ಬೌಲಿಂಗ್​ ಮಾಡಲು ಮತ್ತು ಬ್ಯಾಟರ್​ಗಳೆಲ್ಲ (ಗರಿಷ್ಠ 11 ಮಂದಿ) ಬ್ಯಾಟಿಂಗ್​ ಮಾಡಲು ಅವಕಾಶವಿರುತ್ತದೆ.

ಕಾಡುತ್ತಿದೆ ಮಳೆ ಭೀತಿ

ಅಹರ್ನಿಶಿ ಟೆಸ್ಟ್​ಗೆ ಪೂರ್ವಸಿದ್ಧತೆಯಾಗಿರುವ ಅಭ್ಯಾಸ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಇದೆ. ಇದರಿಂದಾಗಿ ಭಾರತ ತಂಡಕ್ಕೆ ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸಲು ಅವಕಾಶ ದೊರೆಯದಿರುವ ಸಾಧ್ಯತೆ ಇದೆ. ಮೊದಲ ದಿನ ಮಳೆಯಿಂದ ಹೆಚ್ಚಿನ ತೊಂದರೆ ಎದುರಾದರೆ, 2ನೇ ದಿನ ಮಳೆ ಅಡಚಣೆಯ ಭೀತಿ ಸ್ವಲ್ಪ ಕಡಿಮೆ ಇದೆ.

ಅಭ್ಯಾಸಕ್ಕೆ ಮರಳಿದ ಗಿಲ್​

ಬಾರ್ಡರ್​-ಗಾವಸ್ಕರ್​ ಟ್ರೋಫಿ ಸರಣಿ ಆರಂಭಕ್ಕೆ ಮುನ್ನ ಕೈ ಹೆಬ್ಬೆರಳು ಗಾಯಕ್ಕೊಳಗಾಗಿದ್ದ ಬ್ಯಾಟರ್​ ಶುಭಮಾನ್​ ಗಿಲ್​ ಶುಕ್ರವಾರ ಟೀಮ್​ ಇಂಡಿಯಾದ ನೆಟ್ಸ್​ ಅಭ್ಯಾಸಕ್ಕೆ ಮರಳಿದರು. ಇದರಿಂದಾಗಿ ಅವರು ಅಡಿಲೇಡ್​ ಟೆಸ್ಟ್​ನಲ್ಲಿ ಆಡುವ ನಿರೀಕ್ಷೆ ಹೆಚ್ಚಾಗಿದೆ. ಗಾಯದಿಂದಾಗಿ ಗಿಲ್​ ಪರ್ತ್​ ಟೆಸ್ಟ್​ನಲ್ಲಿ ಆಡಿರಲಿಲ್ಲ. ಪಿಂಕ್​ಬಾಲ್​ ಅಭ್ಯಾಸ ಪಂದ್ಯಕ್ಕೆ ಪೂರ್ವಭಾವಿಯಾಗಿ ಅವರು ವೇಗಿಗಳಾದ ಯಶ್​ ದಯಾಳ್​ ಮತ್ತು ಆಕಾಶ್​ ದೀಪ್​ ಎಸೆತಗಳನ್ನು ಎದುರಿಸಿದರು. "ಇನ್ನೂ ನೋವು ಇದೆಯೇ ಎಂಬುದನ್ನು ಪರೀಕ್ಷಿಸಲು ಅಭ್ಯಾಸಕ್ಕಿಳಿದೆ. ಆದರೆ ನಿರೀಕ್ಷೆಗಿಂತ ಉತ್ತಮವಾಗಿ ಚೇತರಿಸಿಕೊಂಡು ಅನುಭವವಾಗಿದೆ. ಫಿಸಿಯೋ ಕಮಲೇಶ್​ ಜೈನ್​ ಕೂಡ ಈ ಬಗ್ಗೆ ಖುಷಿಯಾಗಿದ್ದಾರೆ' ಎಂದು ಗಿಲ್​ ಅಭ್ಯಾಸದ ಬಳಿಕ ಹೇಳಿಕೊಂಡರು. ಮಹತ್ವದ ಸರಣಿಗೆ ಮುನ್ನ ಗಾಯಕ್ಕೊಳಗಾಗಿದ್ದು ಬೇಸರ ತಂದಿತ್ತು ಎಂದೂ ಗಿಲ್​ ಹೇಳಿದರು. ಪರ್ತ್​ನಲ್ಲಿ ಗಿಲ್​ ಸ್ಥಾನದಲ್ಲಿ ಕನ್ನಡಿಗ ದೇವದತ್​ ಪಡಿಕ್ಕಲ್​ ಆಡಿದ್ದರು. ಆದರೆ ನಿರೀತ ನಿರ್ವಹಣೆ ತೋರುವಲ್ಲಿ ವಿಲರಾಗಿದ್ದರು. ಆದರೂ ಗಿಲ್​ ಅಡಿಲೇಡ್​ ಟೆಸ್ಟ್​ಗೆ ಫಿಟ್​ ಆದರೆ ಭಾರತಕ್ಕೆ ಬ್ಯಾಟಿಂಗ್​ ಕ್ರಮಾಂಕದ ಗೊಂದಲ ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net