ಆರ್​ಸಿಬಿ ಹಿಂದಿ ಹೇರಿಕೆಗೆ ಅಭಿಮಾನಿಗಳಿಂದ ಆಕ್ರೋಶ!

web rcb
Published on

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣ "ಎಕ್ಸ್​'ನಲ್ಲಿ ಕನ್ನಡ ಬರವಣಿಗೆಯ ಪೋಸ್ಟ್​ಗಳಿಗಾಗಿ ಪ್ರತ್ಯೇಕ ಖಾತೆಯನ್ನು ತೆರೆದಾಗ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ಅದರ ಬೆನ್ನಲ್ಲೇ ಹಿಂದಿ ಪೋಸ್ಟ್​ಗಳಿಗಾಗಿ ಮತ್ತೊಂದು ಖಾತೆ ತೆರೆದ ಬೆನ್ನಲ್ಲೇ ಅಭಿಮಾನಿಗಳಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಐಪಿಎಲ್​ ಮೆಗಾ ಹರಾಜಿನಲ್ಲಿ ಕೆಎಲ್​ ರಾಹುಲ್​ ಸಹಿತ ಕರ್ನಾಟಕದ ಪ್ರಮುಖ ಕ್ರಿಕೆಟಿಗರನ್ನು ಕಡೆಗಣಿಸಿದ ಬೆನ್ನಲ್ಲೇ, ಹಿಂದಿ ಹೇರಿಕೆಗೆ ಮುಂದಾಗಿರುವುದು ಕನ್ನಡಿಗರನ್ನು ಕೆರಳಿಸಿದೆ. ಹಿಂದಿ ಖಾತೆಯಿಂದ ಆರ್​ಸಿಬಿ ಮಾಡಿದ ಮೊದಲ ಪೋಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಹಿಂದಿಯಲ್ಲೇ ಮಾತನಾಡಿದ್ದರು. ಬಳಿಕ ಕೃತಕ ಬುದ್ದಿಮತ್ತೆ ಬಳಸಿ ಇದೇ ವಿಡಿಯೋವನ್ನು ಕೊಹ್ಲಿ ಕನ್ನಡದಲ್ಲಿ ಮಾತನಾಡಿದಂತೆ ಕನ್ನಡದ ಖಾತೆಯಿಂದ ಪೋಸ್ಟ್​ ಮಾಡಿತ್ತು.

"ಬೆಂಗಳೂರು ಎಂದರೆ ಕನ್ನಡ ಸಂಸತಿ ಮತ್ತು ಭಾಷೆ. ಹೀಗಾಗಿ ಆರ್​ಸಿಬಿ ತಂಡ ಸ್ಥಳಿಯ ಭಾಷೆಯನ್ನು ಬಳಸಬೇಕು. ಅಭಿಮಾನಿಗಳೊಂದಿಗೆ ಸಂವಹನಕ್ಕಾಗಿ ಕನ್ನಡ-ಇಂಗ್ಲಿಷ್​ ಮಾತ್ರ ಬಳಸಬೇಕು. ಹಿಂದಿ ಹೇರಿಕೆ ನಿಲ್ಲಿಸಬೇಕು' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ನಡುವೆ ಆರ್​ಸಿಬಿ ವಲಯದಿಂದ ಹಿಂದಿ ಖಾತೆಗೆ ಸಮರ್ಥನೆಯೂ ಬಂದಿದ್ದು, ಆರ್​ಸಿಬಿ ತಂಡ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದೆ. ಹೀಗಾಗಿ ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ಹಿಂದಿ ಭಾಷೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net