ತೆಳ್ಳಗಿರುವ ಆಟಗಾರರು​ ಬೇಕಿದ್ರೆ ಮಾಡೆಲ್​ಗಳನ್ನು ಕರೆತನ್ನಿ! ಶಮಾ ಹೇಳಿಕೆಗೆ ದಿಗ್ಗಜನ ತಿರುಗೇಟು, ಗವಾಸ್ಕರ್​ ಕಿಡಿನುಡಿ | Sunil Gavaskar

ವಿಜಯವಾಣಿ - 2025-03-04T132744.492
Published on

Sunil Gavaskar: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮರನ್ನು ದಡೂತಿ ಕ್ರಿಕೆಟಿಗ, ತೂಕ ಇಳಿಸಿಕೊಳ್ಳಬೇಕು ಎಂದೆಲ್ಲಾ ಟೀಕಿಸಿ ಮಾತನಾಡಿರುವ ಕಾಂಗ್ರೆಸ್​ ವಕ್ತಾರೆ ಶಮಾ ಮೊಹಮ್ಮದ್​, ತಮ್ಮ ಹೇಳಿಕೆಗಳಿಂದ ಸದ್ಯ ಭಾರೀ ವಿವಾದಕ್ಕೆ ಸಿಲುಕಿದ್ದಾರೆ. ಫಿಟ್ನೆಸ್​ ಕಾಯ್ದುಕೊಳ್ಳದೆ, ದಪ್ಪ ದೇಹವನ್ನು ಹೊತ್ತಿರುವ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ, ತಂಡದಲ್ಲಿರಲು ಅನರ್ಹ ಎಂದು ಶಮಾ ಟೀಕಿಸಿದ್ದಾರೆ. 'ಹಿಟ್​ಮ್ಯಾನ್'​ ಟೀಕಿಸುವ ಭರದಲ್ಲಿ ವಿವಾದ ಸುಳಿಗೆ ಸಿಲುಕಿರುವ ಶಮಾ, ಸದ್ಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಭಾರತ ತಂಡದ ನಾಯಕನನ್ನು ದೇಹದ ಆಕಾರದ ಮೇಲೆ ಅಳೆದು, ಟೀಕಿಸಿದ ಶಮಾ ವಿರುದ್ಧ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಈ ಹಿಂದೆಯೂ ಇಂತಹ ಮಾತನ್ನು ನಾನು ಹಲವಾರು ಬಾರಿ ಹೇಳಿದ್ದೇನೆ. ನಿಮಗೆ ತೆಳ್ಳಗಿರುವ ಯುವಕರು ಬೇಕಿದ್ದರೆ, ನೇರವಾಗಿ ಮಾಡೆಲಿಂಗ್ ಸ್ಪರ್ಧೆಗಳಿಗೆ ಹೋಗಿ ಅಲ್ಲಿರುವ ಮಾಡೆಲ್​ಗಳನ್ನು ಕರೆತನ್ನಿ. ಅಸಲಿಗೆ ಇದೆಲ್ಲ ವಿಷಯ. ಇಲ್ಲಿ ಬೇಕಿರುವುದು ಆಡುವ ಸಾಮರ್ಥ್ಯ" ಎಂದಿದ್ದಾರೆ.

"ಇಲ್ಲಿ ವಿಷಯ ಕ್ರಿಕೆಟ್ ಅನ್ನು ನೀವೆಷ್ಟು ಚೆನ್ನಾಗಿ ಆಡಬಹುದು ಎಂಬುದರ ಬಗ್ಗೆ. ನಾವು ಸರ್ಫರಾಜ್ ಖಾನ್ ಕುರಿತು ಮಾತನಾಡಿದ್ದೇವೆ. ಅವರು ಟೆಸ್ಟ್ ಪಂದ್ಯದಲ್ಲಿ ಭಾರತಕ್ಕಾಗಿ 150 ರನ್ ಗಳಿಸಿದ್ದಾರೆ. ಮತ್ತು ಅದಾದ ನಂತರ 2ರಿಂದ 3 ಅರ್ಧಶತಕ ದಾಖಲಿಸಿದ್ದಾರೆ. ಅಲ್ಲಿಗೆ ನಿಮ್ಮ ಸಮಸ್ಯೆ ಏನು? ದೇಹ ಗಾತ್ರಕ್ಕೂ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿಲ್ಲ. ಅದು ನಿಮ್ಮ ಮಾನಸಿಕ ಶಕ್ತಿ ಮೇಲೆ ನಿಂತಿದೆ. ಕ್ರಿಕೆಟ್‌ನಲ್ಲಿ ದೈಹಿಕ ನೋಟಕ್ಕಿಂತ ಮಾನಸಿಕ ಬಲ ಮತ್ತು ರನ್​ ಬಾರಿಸುವ ಸಾಮರ್ಥ್ಯ ಅತಿಮುಖ್ಯ" ಎಂದು ಗವಾಸ್ಕರ್ ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net