ಪಾಕಿಸ್ತಾನ ಮತ್ತೆ ತಗಾದೆ; ಏಷ್ಯಾಕಪ್​ ವೇಳಾಪಟ್ಟಿ ಪ್ರಕಟ ಮತ್ತಷ್ಟು ವಿಳಂಬ

Asia web
Published on

ನವದೆಹಲಿ: ಮುಂಬರುವ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯ ವೇಳಾಪಟ್ಟಿಯನ್ನು ಈ ವಾರ ನಿರೀಸುತ್ತಿದ್ದ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಮತ್ತೆ ತಗಾದೆ ತೆಗೆದಿರುವ ಕಾರಣ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ವಿಳಂಬಗೊಂಡಿದೆ. ಹೈಬ್ರಿಡ್​ ಮಾದರಿಯ ಅನ್ವಯ, ಟೂರ್ನಿಯ ಆರಂಭಿಕ 4 ಪಂದ್ಯಗಳ ಆತಿಥ್ಯಕ್ಕೆ ಈ ಮುನ್ನ ಒಪ್ಪಿದ್ದ ಪಿಸಿಬಿ ಇದೀಗ, 4ಕ್ಕಿಂತ ಹೆಚ್ಚು ಪಂದ್ಯಗಳ ಆತಿಥ್ಯಕ್ಕೆ ಬೇಡಿಕೆ ಇಟ್ಟಿದೆ.

ಜತೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯ ಪಂದ್ಯಗಳಿಂದ ಗಳಿಸುವ ಆದಾಯದಲ್ಲಿ ತನಗೆ ಹೆಚ್ಚಿನ ಪಾಲು ಲಭಿಸಬೇಕೆಂದೂ ಡಿಮ್ಯಾಂಡ್​ ಮಾಡಿದೆ. ಈ ಸಂಬಂಧ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಭಾನುವಾರ ದುಬೈನಲ್ಲಿ ತುರ್ತು ಸಭೆ ಕರೆದಿದೆ.

ಹಾಲಿ ವೇಳಾಪಟ್ಟಿಯ ಪ್ರಕಾರ ಏಷ್ಯಾಕಪ್​ ಆಗಸ್ಟ್​ 31ರಿಂದ ಸೆಪ್ಟೆಂಬರ್​ 17ರವರೆಗೆ ನಿಗದಿಯಾಗಿದೆ. ಈ ಸಮಯದಲ್ಲಿ ಶ್ರೀಲಂಕಾದಲ್ಲಿ ಹೆಚ್ಚಿನ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಅಲ್ಲಿ ನಿಗದಿಯಾಗಿರುವ 9 ಪಂದ್ಯಗಳ ಪೈಕಿ ಮತ್ತೆ ಕೆಲವನ್ನು ತನಗೆ ಬಿಟ್ಟುಕೊಡಬೇಕೆಂದು ಪಿಸಿಬಿ ಹೊಸ ಪ್ರಸ್ತಾಪ ಸಲ್ಲಿಸಿದೆ.

ಇದಲ್ಲದೆ ಕಳೆದ ವರ್ಷದ ಟೂರ್ನಿಯನ್ನು ತಟಸ್ಥ ತಾಣ ಯುಎಇಯಲ್ಲಿ ಆಯೋಜಿಸಿದಾಗ ಆಗಿನ ಆತಿಥೇಯ ಭಾರತಕ್ಕೆ ಎಷ್ಟು ಪ್ರಮಾಣದಲ್ಲಿ ಆದಾಯದ ಪಾಲು ನೀಡಲಾಗಿತ್ತೋ, ಅಷ್ಟೇ ಪಾಲನ್ನು ಶ್ರೀಲಂಕಾದಲ್ಲಿನ ಪಂದ್ಯಗಳಿಂದಲೂ ತನಗೆ ನೀಡಬೇಕೆಂದು ಪಿಸಿಬಿ ಬೇಡಿಕೆ ಮಂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net