

ರಾವಲ್ಪಿಂಡಿ: ಇತ್ತೀಚೆಗಷ್ಟೇ ಎರಡು ಪಂದ್ಯಗಳ ಮೊದಲ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸಿದೆ.
ಇನ್ನು ಬಾಂಗ್ಲಾ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನ್ನು ನೆನೆದು ಬೇಸರ ವ್ಯಕ್ತಪಡಿಸಿದ ಕ್ಯಾಪ್ಟನ್ ಶಾನ್ ಮಸೂದ್, “ಈ ಸಂದರ್ಭದಲ್ಲಿ ನಮ್ಮ ಇಡೀ ದೇಶದ ಜನತೆಗೆ ಕ್ಷಮೆಯಾಚಿಸಲು ಬಯಸುವೆ. ಮುಂದಿನ ಪಂದ್ಯಗಳಲ್ಲಿ ಈ ರೀತಿ ಕಳಪೆಯಾಗಿ ಆಡುವುದಿಲ್ಲ. ಉತ್ತಮ ಕಮ್ಬ್ಯಾಕ್ ಮಾಡ್ತೇವೆ. ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಮತ್ತು ಅವುಗಳ ಮೇಲೆ ಹೆಚ್ಚು ಕೆಲಸ ಮಾಡಬೇಕು” ಎಂದು ಹೇಳಿದರು. ಸದ್ಯ ಪಾಕ್ ಆಟಗಾರರ ಅತ್ಯಂತ ಕಳಪೆ ಪ್ರದರ್ಶನದಿಂದ ತೀವ್ರ ಸಿಟ್ಟಾಗಿರುವ ಪಿಸಿಬಿ ಮುಖ್ಯಸ್ಥರು, ಇವರಿಂದ ನಾವು ತಲೆತಗ್ಗಿಸುವಂತಾಯಿತು. ಇಷ್ಟು ವರ್ಷಗಳಲ್ಲಿ ಇಂತಹ ಸೋಲನ್ನೇ ನೋಡಿರಲಿಲ್ಲ ಎಂದು ಕಟುವಾಗಿ ಮಾತನಾಡಿದ್ದಾರೆ.
ಸೋಮವಾರ (ಆ.26) ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಸಿಬಿ ಮುಖ್ಯಸ್ಥ ನಖ್ವಿ, "ಈ ಸೋಲನ್ನು ನಿಜಕ್ಕೂ ಊಹಿಸಿರಲಿಲ್ಲ. ಇದನ್ನು ಅರಗಿಸಿಕೊಳ್ಳುವುದೇ ದೊಡ್ಡ ಕಷ್ಟವಾಗಿದೆ. ನಮ್ಮ ಆಯ್ಕೆ ಸಮಿತಿಯಲ್ಲೇ ಮೊದಲ ಸಮಸ್ಯೆ ಅಡಗಿರುವುದು. ಟಿ20 ವಿಶ್ವಕಪ್ ಟೂರ್ನಿಯಿಂದ ಬಹಳ ವೇಗವಾಗಿ ನಿರ್ಗಮಿಸಿದಾಗಲೇ ನಾವು ಸರ್ಜರಿ ಮಾಡಬೇಕಿತ್ತು. ಆದ್ರೆ, ಆಗ ಮಾಡಲಿಲ್ಲ" ಎಂದರು.
"ಈಗ ಇದಕ್ಕೆ ಸರಿಯಾದ ಸಮಯ ಎದುರಾಗಿದೆ. ಶೀಘ್ರವೇ ಒಂದು ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಸಲಿದ್ದೇವೆ. ಪಿಚ್ ನಾವು ಅಂದುಕೊಂಡ ರೀತಿ ಇರಲಿಲ್ಲ. ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಹವಾಮಾನವು ಇದಕ್ಕೆ ತೊಂದರೆ ಉಂಟುಮಾಡಿತು. ಆಟ ಪ್ರಾರಂಭಕ್ಕೂ ಮುನ್ನ ಮೊದಲ 8-9 ದಿನಗಳು ಮಳೆ ಸುರಿದಿತ್ತು. ಅಂತಿಮವಾಗಿ ನಮ್ಮ ವೇಗಿಗಳಿಂದ ಬಾಂಗ್ಲಾ ಬೌಲರ್ಗಳನ್ನು ಬಗ್ಗುಬಡಿಯುವ ಲೆಕ್ಕಾಚಾರಗಳು ತಲೆಕೆಳಗಾಯಿತು" ಎಂದು ಬೇಸರ ಹೊರಹಾಕಿದರು,(ಏಜೆನ್ಸೀಸ್).