ಆಸೀಸ್​ ಬದಲಿಗೆ ಭಾರತದ ರಾಷ್ಟ್ರಗೀತೆ ಪ್ರಸಾರ! ವಿವರಣೆ ಕೇಳಿ ಐಸಿಸಿಗೆ ಪತ್ರ ಬರೆದ PCB

Champions Trophy
Published on

ಲಾಹೋರ್: ಈ ಹಿಂದೆ ಭಾರತದ ರಾಷ್ಟ್ರಧ್ವಜವನ್ನು ಕಡೆಗಣಿಸುವ ಮೂಲಕ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಇದೀಗ ಮತ್ತೊಂದು ಎಡವಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಮೂಲಕ ಆತಿಥೇಯ ರಾಷ್ಟ್ರ ಮತ್ತೊಮ್ಮೆ ಮುಜುಕರಕ್ಕೀಡಾಗಿದೆ.

ಶನಿವಾರ (ಫೆಬ್ರವರಿ 22) ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ನಡುವಿನ ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವ ಆತಿಥೇಯ ಮೂಲಕ ಪಾಕ್ ಮುಜುಗರಕ್ಕೀಡಾಗಿದೆ. ಇಂಗ್ಲೆಂಡ್‌ನ ರಾಷ್ಟ್ರಗೀತೆಯ ಬಳಿಕ ಆಸೀಸ್ ರಾಷ್ಟ್ರಗೀತೆ ಪ್ರಸಾರ ಮಾಡುವ ಬದಲು ಭಾರತದ ರಾಷ್ಟ್ರಗೀತೆಯನ್ನು ಕ್ರೀಡಾಂಗಣದಲ್ಲಿನ ಡಿಜೆಯಲ್ಲಿ ಪ್ರಸಾರ ಮಾಡಲಾಯಿತು. ಅನಿರೀಕ್ಷಿತ ಗೊಂದಲದಿಂದಾಗಿ ಆಸ್ಟ್ರೇಲಿಯಾ ಆಟಗಾರರು ಮತ್ತು ಪ್ರೇಕ್ಷಕರು ದಿಗ್ಧಮೆಗೊಂಡರು. ಕೆಲ ಸೆಕೆಂಡ್‌ಗಳ ಬಳಿಕ ತಪ್ಪು ತಿದ್ದಿಕೊಂಡ ಆಯೋಜಕರು ಗೀತೆಯನ್ನು ಅರ್ಧಕ್ಕೆ ನಿಲ್ಲಿಸಿದರು.

ಪಾಕ್ ಕ್ರಿಕೆಟ್ ಮಂಡಳಿಯ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಪಿಸಿಬಿ (PCB) ಐಸಿಸಿ ವಿರುದ್ಧ ಕಿಡಿಕಾರಿದ್ದು, ಸಮಜಾಯಿಷಿ ನೀಡುವಂತೆ ಪತ್ರ ಬರೆದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡಗಳ ರಾಷ್ಟ್ರಗೀತೆಗೆ ಸಂಬಂಧಪಟ್ಟ ದೇಶದವರು ಜವಾಬ್ದಾರರಾಗಿದ್ದು, ಐಸಿಸಿ ಕೆಲವು ವಿವರಣೆಯನ್ನು ನೀಡುವ ಅಗತ್ಯವಿದೆ. ಭಾರತವು ಪಾಕಿಸ್ತಾನದಲ್ಲಿ ಆಡುತ್ತಿಲ್ಲವಾದ್ದರಿಂದ, ತಪ್ಪಾಗಿ ಅವರ ರಾಷ್ಟ್ರಗೀತೆಯನ್ನು ಹೇಗೆ ಪ್ಲೇ ಮಾಡಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ಸ್ಪಷ್ಟನೆ ಕೇಳಿ ಪತ್ರ ಬರೆದಿರುವುದಾಗಿ ಉನ್ನತ ಸುದ್ದಿ ಮೂಲಗಳು ತಿಳಿಸಿದೆ. 

ಭದ್ರತೆಯ ಕಾರಣ ನೀಡಿ ಭಾರತ ಪಾಕ್​ ನೆಲದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡಲು ನಿರಾಕರಿಸಿತ್ತು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್​ ಮಾದರಿ) ಆಡಲು ಒಪ್ಪಿಕೊಂಡಿತ್ತು. ಮೊದಲಿಗೆ ಧ್ವಜದ ವಿಚಾರವಾಗಿ ಟೀಕೆಗೆ ಗುರಿಯಾಗಿದ್ದ ಪಾಕ್ ಕ್ರಿಕೆಟ್ ಮಂಡಳಿ (PCB) ರಾಷ್ಟ್ರಗೀತೆ ಮೂಲಕ ಮತ್ತೊಮ್ಮೆ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಆದರೆ, ವಿವರಣೆ ಕೇಳಿ ಐಸಿಸಿಗೆ ಪತ್ರ ಬರೆದಿರುವುದು ಚರ್ಚೆಗೀಡು ಮಾಡಿದ್ದು, ಐಸಿಸಿ ಇದನ್ನು ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net