ಫ್ರೆಂಚ್ ಓಪನ್ ಫೈನಲ್‌ಗೇರಿದ ಪಾವ್ಲಚೆಂಕೋವಾ

frech web
Published on

ಪ್ಯಾರಿಸ್: ರಷ್ಯಾದ ಅನಸ್ಟೆಸಿಯಾ ಪಾವ್ಲಚೆಂಕೋವಾ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ.

29 ವರ್ಷದ ಪಾವ್ಲಚೆಂಕೋವಾ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ಲೊವೇನಿಯಾದ ಟಮರ ಜಿದಾನ್‌ಸೆಕ್‌ಗೆ 7-5, 6-3 ನೇರಸೆಟ್‌ಗಳಿಂದ ಸೋಲುಣಿಸಿದರು. 14 ವರ್ಷಗಳ ವೃತ್ತಿಜೀವನದ ಹಿಂದಿನ 51 ಗ್ರಾಂಡ್ ಸ್ಲಾಂಗಳಲ್ಲಿ 6 ಬಾರಿ ಕ್ವಾರ್ಟರ್​ಫೈನಲ್‌ನಲ್ಲೇ ಎಡವಿದ್ದ ಪಾವ್ಲಚೆಂಕೋವಾ ಇದೇ ಮೊದಲ ಬಾರಿಗೆ ಸೆಮಿಫೈನಲ್ ಆಡಿದರು. ಜತೆಗೆ 50ಕ್ಕೂ ಅಧಿಕ ಗ್ರಾಂಡ್ ಸ್ಲಾಂ ಆಡಿದ ಬಳಿಕ ಚೊಚ್ಚಲ ಫೈನಲ್‌ಗೇರಿದ ಮೊದಲ ಆಟಗಾರ್ತಿ ಎನಿಸಿದ್ದಾರೆ.

ಇಟಲಿಯ ರಾಬರ್ಟ್ ವಿನ್ಸಿ 44 ಗ್ರಾಂಡ್ ಸ್ಲಾಂ ಆಡಿದ ಬಳಿಕ ಫೈನಲ್‌ಗೇರಿದ್ದು ಹಿಂದಿನ ದಾಖಲೆ. ಮರಿಯಾ ಶರಪೋವಾ (2014) ಬಳಿಕ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಫೈನಲ್‌ಗೇರಿದ ಮೊದಲ ರಷ್ಯಾ ಆಟಗಾರ್ತಿ ಎನಿಸಿದ್ದಾರೆ. ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು ಗ್ರೀಕ್‌ನ ಮರಿಯಾ ಸಕ್ಕರಿ ಅಥವಾ ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜ್‌ಸಿಕೋವಾ ವಿರುದ್ಧ ಸೆಣಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net