VIDEO | 45 ಮೀಟರ್ ದೂರದಿಂದ ಗೋಲು, ಯುರೋ ಕಪ್‌ನಲ್ಲಿ ಹೊಸ ದಾಖಲೆ!

football goal web
Published on

ಗ್ಲಾಸ್ಗೋ: ಪ್ಯಾಟ್ರಿಕ್ ಸ್ಕಿಕ್ (42 ಮತ್ತು 52ನೇ ನಿಮಿಷ) ಪಂದ್ಯದ ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಸಿಡಿಸಿದ ಆಕರ್ಷಕ ಗೋಲುಗಳ ನೆರವಿನಿಂದ ಜೆಕ್ ಗಣರಾಜ್ಯ ತಂಡ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 2-0ಯಿಂದ ಗೆದ್ದು ಶುಭಾರಂಭ ಕಂಡಿದೆ. 23 ವರ್ಷಗಳ ಬಳಿಕ ಯುರೋ ಕಪ್‌ಗೆ ಅರ್ಹತೆ ಪಡೆದಿರುವ ಸ್ಕಾಟ್ಲೆಂಡ್ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿತು.

ಹಂಪ್‌ಡೆನ್ ಪಾರ್ಕ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಗೋಲು ಬಾರಿಸಲು ಆತಿಥೇಯ ಸ್ಕಾಟ್ಲೆಂಡ್‌ನಿಂದ ಹೆಚ್ಚಿನ ಪ್ರಯತ್ನಗಳು ನಡೆದರೂ, ಯಶಸ್ಸು ಲಭಿಸಿದ್ದು ಜೆಕ್ ತಂಡಕ್ಕೆ. ಮೊದಲಾರ್ಧ ಮುಕ್ತಾಯಕ್ಕೆ ಕೇವಲ 3 ನಿಮಿಷ ಇದ್ದಾಗ ಹೆಡರ್ ಮೂಲಕ ಮೊದಲ ಗೋಲು ಬಾರಿಸಿದ ಸ್ಕಿಕ್, ದ್ವಿತೀಯಾರ್ಧದ ಆಟ ಆರಂಭಗೊಂಡ 7 ನಿಮಿಷಗಳಲ್ಲೇ ಟೂರ್ನಿ ಇತಿಹಾಸದಲ್ಲೇ ಅತ್ಯುತ್ತಮ ಗೋಲುಗಳಲ್ಲಿ ಒಂದೆನಿಸಬಹುದಾದ ಗೋಲನ್ನು 49.7 ಯಾರ್ಡ್ (45.44 ಮೀಟರ್) ದೂರದಿಂದ ಬಾರಿಸಿದರು. ಇದು ಟೂರ್ನಿ ಇತಿಹಾಸದಲ್ಲಿ ಅತ್ಯಂತ ದೂರದಿಂದ ದಾಖಲಾದ ಗೋಲು ಎಂಬ ದಾಖಲೆ ಬರೆದಿದೆ. 2004ರಲ್ಲಿ ಜರ್ಮನಿಯ ಟೋಸ್ಟೆನ್ ಫ್ರಿಂಗ್ಸ್ 38.6 ಯಾರ್ಡ್ ದೂರದಿಂದ ಗೋಲು ಬಾರಿಸಿದ್ದು ಹಿಂದಿನ ದಾಖಲೆ.

80ನೇ ನಿಮಿಷದಲ್ಲಿ ಸ್ಕಿಕ್‌ಗೆ ಹ್ಯಾಟ್ರಿಕ್ ಗೋಲು ಬಾರಿಸುವ ಅವಕಾಶ ದೊರೆತರೂ ಅದಕ್ಕೆ ಸ್ಕಾಟ್ಲೆಂಡ್ ಗೋಲ್‌ಕೀಪರ್ ಮಾರ್ಷಲ್ ಅಡ್ಡಿಯಾದರು. ಪಂದ್ಯಕ್ಕೆ 12 ಸಾವಿರ ಪ್ರೇಕ್ಷಕರು ಸಾಕ್ಷಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net