More

    ಫ್ರೆಂಚ್ ಓಪನ್ ಗೆದ್ದ ಜೋಕೊವಿಕ್, 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಸಾಧನೆ

    ಪ್ಯಾರಿಸ್: ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಈ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡ ಸೆರ್ಬಿಯಾ ತಾರೆ ಜೋಕೊವಿಕ್, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರ ತಲಾ 20 ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆಗೆ ಹತ್ತಿರವಾಗಿದ್ದಾರೆ.

    ಅಗ್ರ ಶ್ರೇಯಾಂಕಿತ ಜೋಕೋ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 22 ವರ್ಷದ ಸ್ಟೆಫಾನೋಸ್ ಸಿಸಿಪಾಸ್ ವಿರುದ್ಧ 6-7 (6-8), 2-6, 6-3, 6-2, 6-4 ಸೆಟ್‌ಗಳಿಂದ ಹೋರಾಟಯುತ ಗೆಲುವು ದಾಖಲಿಸಿದರು. ಗ್ರಾಂಡ್ ಸ್ಲಾಂ ಗೆದ್ದ ಮೊದಲ ಗ್ರೀಕ್​ ಆಟಗಾರ ಎನಿಸುವ ಹಂಬಲದಲ್ಲಿದ್ದ 5ನೇ ಶ್ರೇಯಾಂಕಿತ ಸಿಸಿಪಾಸ್ ಮೊದಲೆರಡು ಸೆಟ್ ಗೆದ್ದು ಬೀಗಿದರೂ, ಮುಂದಿನ 3 ಸೆಟ್‌ಗಳಲ್ಲಿ 34 ವರ್ಷದ ಅನುಭವಿ ಆಟಗಾರ ಜೋಕೋ ಅವರಿಂದ ದಿಟ್ಟ ತಿರುಗೇಟು ಎದುರಿಸಿದರು.

    ನಾಲ್ಕು ಗಂಟೆ 11 ನಿಮಿಷಗಳ ಕಾಲ ಸಾಗಿದ ಪ್ರಶಸ್ತಿ ಹೋರಾಟದಲ್ಲಿ ಜೋಕೊವಿಕ್, 2016ರ ಬಳಿಕ 2ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು. 13 ಬಾರಿಯ ಚಾಂಪಿಯನ್ ರಾೆಲ್ ನಡಾಲ್‌ಗೆ ಉಪಾಂತ್ಯದಲ್ಲಿ ಸೋಲುಣಿಸುವ ಮೂಲಕ ಜೋಕೋ ಪ್ರಶಸ್ತಿ ಗೆಲುವಿನ ಅವಕಾಶ ವೃದ್ಧಿಸಿಕೊಂಡಿದ್ದರು. ಈ ಮುನ್ನ 2012, 2014, 2015, 2020ರ ಫೈನಲ್‌ಗಳಲ್ಲಿ ಅವರು (3 ಬಾರಿ ನಡಾಲ್ ವಿರುದ್ಧ) ನಿರಾಸೆ ಅನುಭವಿಸಿದ್ದರು.

    ಜೋಕೊವಿಕ್ 19 ಗ್ರಾಂಡ್ ಸ್ಲಾಂ
    ಆಸ್ಟ್ರೇಲಿಯನ್ ಓಪನ್: 9 (2008,2011,2012,2013,2015,2016,2019, 2020, 2021)
    ಫ್ರೆಂಚ್ ಓಪನ್: 2 (2016, 2021)
    ವಿಂಬಲ್ಡನ್: 5 (2011,2014,2015,2018, 2019)
    ಯುಎಸ್ ಓಪನ್: 3 (2011,2015,2018)

    ಗರಿಷ್ಠ ಗ್ರಾಂಡ್ ಸ್ಲಾಂ ಗೆಲುವು
    ರೋಜರ್ ಫೆಡರರ್: 20
    ರಾಫೆಲ್ ನಡಾಲ್: 20
    ನೊವಾಕ್ ಜೋಕೊವಿಕ್: 19

    ಮುಂದಿನ ಗ್ರಾಂಡ್ ಸ್ಲಾಂ
    ವಿಂಬಲ್ಡನ್
    ಎಲ್ಲಿ: ಲಂಡನ್
    ಯಾವಾಗ: ಜೂನ್ 28-ಜುಲೈ 11

    ಸಿಂಗಲ್ಸ್ ಬಳಿಕ ಡಬಲ್ಸ್‌ನಲ್ಲೂ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಕ್ರೆಜ್‌ಸಿಕೋವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts