

ಪ್ಯಾರಿಸ್: ಟೋಕಿಯೊ ಪ್ಯಾರಾಲಿಂಪಿಕ್ಸ್ ರಜತ ಪದಕ ವಿಜೇತ ಕನ್ನಡಿಗ ಸುಹಾಸ್ ಯತಿರಾಜ್, ನಿತೇಶ್ ಕುಮಾರ್ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮಾನ್ಸಿ ಜೋಷಿ ಸತತ 2ನೇ ಸೋಲಿನೊಂದಿಗೆ ಲೀಗ್ ಹಂತದಲ್ಲೇ ಹೊರಬಿದ್ದರು.
ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ಎಸ್ಎಲ್4 ವಿಭಾಗದ ಎ ಗುಂಪಿನ 2ನೇ ಪಂದ್ಯದಲ್ಲಿ ಕೊರಿಯಾದ ಶಿನ್ ಕ್ಯೂಂಗ್ ಹ್ವಾನ್ ವಿರುದ್ಧ 26-24, 21-14 ನೇರಗೇಮ್ಗಳಿಂದ ಗೆಲುವು ಸಾಧಿಸಿದರು. ಈ ಮೂಲಕ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಉಪಾಂತ್ಯಕ್ಕೇರಿದರು.
ಐಐಟಿ ಪದವೀಧರನಾಗಿರುವ 29 ವರ್ಷದ ನಿತೀಶ್ ಎಸ್ಎಲ್3 ವಿಭಾಗದ ಎ ಗುಂಪಿನಲ್ಲಿ ಚೀನಾದ ಯಂಗ್ ಜಿಯಾನ್ಯುಯಾನ್ ವಿರುದ್ಧ 21-5, 21-11ರಿಂದ ಗೆದ್ದರು. 4 ಷಟ್ಲರ್ಗಳ ಗುಂಪಿನಲ್ಲಿ ನಿತೀಶ್ ಸತತ 2ನೇ ಜಯದೊಂದಿಗೆ ಟಾಪ್2 ಸ್ಥಾನ ಖಾತ್ರಿಪಡಿಸಿಕೊಳ್ಳುವ ಮೂಲಕ ಸೆಮೀಸ್ ಪ್ರವೇಶಿಸಿದ್ದಾರೆ. ನಿತೀಶ್ 2009ರಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಇದೇ ವಿಭಾಗದಲ್ಲಿ ಮನೋಜ್ ಸರ್ಕಾರ್ ಸತತ 2ನೇ ಸೋಲಿನೊಂದಿಗೆ ಸೆಮಿೈನಲ್ ರೇಸ್ನಿಂದ ಹೊರಬಿದ್ದರು.
ಮಹಿಳೆಯರ ಎಸ್ಎಲ್3 ವಿಭಾಗದಲ್ಲಿ 2019ರ ವಿಶ್ವ ಚಾಂಪಿಯನ್ ಮಾನ್ಸಿ ಜೋಷಿ ಯೂಕ್ರೇನ್ನ ಒಕ್ಸಾನಾ ಕೊಝಿನಾ ವಿರುದ್ಧ 21-10, 15-21, 21-23ರಿಂದ ಪರಾಭವಗೊಂಡರು. ಮೊದಲ ಪಂದ್ಯದಂತೆ ಈ ಸಲವೂ ಮೊದಲ ಗೇಮ್ ಗೆದ್ದರೂ, ನಂತರದ 2 ಗೇಮ್ ಸೋತು ಮಾನ್ಸಿ ನಿರಾಸೆ ಅನುಭವಿಸಿದರು. ಸುಹಾಸ್ ಮತ್ತು ಪಾಲಕ್ ಕೊಹ್ಲಿ ಜೋಡಿ ಮಿಶ್ರ ಡಬಲ್ಸ್ ಎಸ್ಎಲ್3-ಎಸ್ಯು5 ವಿಭಾಗದಲ್ಲಿ ಸತತ 2ನೇ ಸೋಲು ಅನುಭವಿಸಿದ್ದು, ಕೊನೇ ಪಂದ್ಯಕ್ಕೆ ಮುನ್ನವೇ ಸೆಮೀಸ್ ಆಸೆ ಕೈಚೆಲ್ಲಿದೆ.
ಕನ್ನಡಿಗ ಶ್ರೀಹರ್ಷಗೆ ನಿರಾಸೆ
ಕರ್ನಾಟಕದ ಶೂಟರ್ ಶ್ರೀಹರ್ಷ ರಾಮಕೃಷ್ಣ ದೇವರೆಡ್ಡಿ ಮಿಶ್ರ 10 ಮೀ. ಏರ್ ರೈಫಲ್ (ಎಸ್ಎಚ್2) ಸ್ಟಾ$ಂಡಿಂಗ್ ವಿಭಾಗದಲ್ಲಿ ಕೇವಲ 0.1 ಅಂಕದಿಂದ ಫೈನಲ್ಗೇರುವ ಅವಕಾಶ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. 630.7 ಅಂಕ ಗಳಿಸಿದ ಶ್ರೀಹರ್ಷ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಶೂಟರ್ಗಳ ಫೈನಲ್ಗೆ ನ್ಯೂಜಿಲೆಂಡ್ನ ಮೈಕೆಲ್ ಜಾನ್ಸನ್ 630.8 ಅಂಕದೊಂದಿಗೆ ಕೊನೆಯವರಾಗಿ ಅರ್ಹತೆ ಗಳಿಸಿದರು.