

ಮೊನಾಕೊ: ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಸಾಮಾನ್ಯವಾಗಿ ಪದಕಗಳಷ್ಟೇ ಲಭಿಸುತ್ತವೆ. ಯಾವುದೇ ನಗದು ಬಹುಮಾನವನ್ನು ನೀಡಲಾಗುವುದಿಲ್ಲ. ಪದಕ ವಿಜೇತ ಕ್ರೀಡಾಪಟುಗಳ ತವರು ದೇಶದಲ್ಲಷ್ಟೇ ಸರ್ಕಾರ, ಕಂಪನಿಗಳಿಂದ ವಿಶೇಷ ನಗದು ಮತ್ತು ಇತರ ಬಹುಮಾನಗಳು ಲಭಿಸುತ್ತವೆ. ಆದರೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ನ ಟ್ರಾ$್ಯಕ್ ಆಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್ಗಳಿಗೆ 41.60 ಲಕ್ಷ ರೂ. ನಗದು ಬಹುಮಾನವೂ ಲಭಿಸಲಿದೆ.
ಟ್ರಾ$್ಯಕ್ ಆಂಡ್ ಫೀಲ್ಡ್ ಕ್ರೀಡೆಯ ಜಾಗತಿಕ ಆಡಳಿತ ಸಂಸ್ಥೆಯಾದ "ವರ್ಲ್ಡ್ ಅಥ್ಲೆಟಿಕ್ಸ್' (ಡಬ್ಲ್ಯುಎ) ಈ ವಿಶೇಷ ಬಹುಮಾನವನ್ನು ಪ್ರಕಟಿಸಿದ್ದು, ಪ್ಯಾರಿಸ್ನಲ್ಲಿ ನಡೆಯುವ ಎಲ್ಲ 48 ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್ಗಳಿಗೆ ನಗದು ಬಹುಮಾನ ನೀಡಲಿದೆ. ಜತೆಗೆ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಿಂದ ಬೆಳ್ಳಿ ಮತ್ತು ಕಂಚು ಗೆಲ್ಲುವ ಅಥ್ಲೀಟ್ಗಳಿಗೂ ನಗದು ಬಹುಮಾನ ವಿತರಿಸಲು ನಿರ್ಧರಿಸಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿದ್ದ ಭಾರತದ ನೀರಜ್ ಚೋಪ್ರಾ ಈ ಬಾರಿ ಅದನ್ನು ಉಳಿಸಿಕೊಂಡರೆ 41.60 ಲಕ್ಷ ರೂ. ನಗದು ಬಹುಮಾನವನ್ನೂ ಪಡೆಯಲಿದ್ದಾರೆ.
"ಒಲಿಂಪಿಕ್ಸ್ ಆಯೋಜನೆಯ ಆದಾಯದಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ವಿತರಿಸುವ ಪಾಲಿನಲ್ಲಿ 19.97 ಕೋಟಿ ರೂ.ಗಳನ್ನು ಸ್ವರ್ಣ ವಿಜೇತ ಅಥ್ಲೀಟ್ಗಳಿಗೆ ವಿತರಿಸಲಾಗುವುದು. ಈ ಮೂಲಕ ವರ್ಲ್ಡ್ ಅಥ್ಲೆಟಿಕ್ಸ್, ಒಲಿಂಪಿಕ್ಸ್ ಪದಕ ವಿಜೇತರಿಗೆ ನಗದು ಬಹುಮಾನ ವಿತರಿಸುವ ಮೊದಲ ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿರಲಿದೆ. ಲಾಸ್ ಏಂಜಲಿಸ್ ಒಲಿಂಪಿಕ್ಸ್ನ ಮೂರೂ ಪದಕ ವಿಜೇತರಿಗೆ ವಿತರಿಸಲಾಗುವ ಬಹುಮಾನ ಮೊತ್ತದ ಪಾಲನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುತ್ತದೆ' ಎಂದು ವರ್ಲ್ಡ್ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋಯಿ ತಿಳಿಸಿದ್ದಾರೆ. ರಿಲೇ ತಂಡಗಳಿಗೂ ಇದೇ ಬಹುಮಾನ ವಿತರಿಸಲಾಗುವುದು ಮತ್ತು ಬಹುಮಾನ ಮೊತ್ತ ತಂಡದ ಸದಸ್ಯರಿಗೆ ಹಂಚಿಕೆಯಾಗಲಿದೆ.