ವಿನೇಶ್​, ಅಂಶು, ರೀತಿಕಾಗೆ ಒಲಿದ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​

web wresling
Published on

ಬಿಶ್ಕೆಕ್​ (ಕಿರ್ಗಿಸ್ತಾನ): ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಶರಣ್​ ಸಿಂಗ್​ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ನಡುವೆ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಅಮೋ ನಿರ್ವಹಣೆಯೊಂದಿಗೆ ಭರ್ಜರಿ ಪುನರಾಗಮನ ಕಂಡಿರುವ ವಿನೇಶ್​ ಪೋಗಟ್​ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಕೋಟಾ ಸ್ಥಾನ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ದೇಶದ ಇಬ್ಬರು ಯುವ ಮಹಿಳಾ ಕುಸ್ತಿಪಟುಗಳಾದ ಅಂಶು ಮಲಿಕ್​ ಮತ್ತು 23 ವಯೋಮಿತಿಯ ವಿಶ್ವ ಚಾಂಪಿಯನ್​ ರೀತಿಕಾ ಕೂಡ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಒಲಿಸಿಕೊಂಡಿದ್ದಾರೆ.

29 ವರ್ಷದ ವಿನೇಶ್​ ಪೋಗಟ್​ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್​ ಕೋಟಾ ಗೆದ್ದುಕೊಂಡರು. ಶನಿವಾರ ನಡೆದ ಸೆಮಿೈನಲ್​ ಪಂದ್ಯದಲ್ಲಿ ಅವರು ಕಜಾಕಿಸ್ತಾನದ 19 ವರ್ಷದ ಕುಸ್ತಿಪಟು ಲೌರಾ ಗನಿಕಿಜಿ ವಿರುದ್ಧ ಸುಲಭ ಗೆಲುವು ಸಾಧಿಸಿದರು. 2016ರ ರಿಯೋ ಮತ್ತು 2021ರ ಟೋಕಿಯೊ ಗೇಮ್ಸ್​ನಲ್ಲಿ ಸ್ಪರ್ಧಿಸಿದ್ದ ವಿನೇಶ್​ಗೆ ಇದು 3ನೇ ಒಲಿಂಪಿಕ್ಸ್​ ಪ್ರವೇಶವಾಗಿದೆ.

ಭಾರತ ಈಗ ಪ್ಯಾರಿಸ್​ ಒಲಿಂಪಿಕ್ಸ್​ಗೆ ಮಹಿಳಾ ಕುಸ್ತಿ ಸ್ಪರ್ಧೆಯ 4 ಕೋಟಾ ಸ್ಥಾನ ಗೆದ್ದುಕೊಂಡಂತಾಗಿದೆ. ಅಂತಿಮ್​ ಪಾಂಗಲ್​ ಈಗಾಗಲೆ 53 ಕೆಜಿ ವಿಭಾಗದ ಕೋಟಾ ಸ್ಥಾನ ಗೆದ್ದುಕೊಂಡಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ ಇನ್ನು ಕೋಟಾ ಸ್ಥಾನ ಗೆದ್ದುಕೊಟ್ಟವರಿಗೇ ಒಲಿಂಪಿಕ್ಸ್​ ಸ್ಪರ್ಧೆ ಅವಕಾಶ ಕಲ್ಪಿಸುವುದೇ ಅಥವಾ ಮತ್ತೆ ಆಯ್ಕೆ ಟ್ರಯಲ್ಸ್​ ಆಯೋಜಿಸುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ಭಾರತದ ಪುರುಷ ಕುಸ್ತಿಪಟುಗಳಲ್ಲಿ ಯಾರೊಬ್ಬರಿಗೂ ಇದುವರೆಗೆ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆ ಲಭಿಸಿಲ್ಲ. ಮೇ 9ರಂದು ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಅರ್ಹತಾ ಕೂಟ ಒಲಿಂಪಿಕ್ಸ್​ ಕೋಟಾ ಸ್ಥಾನ ಗೆಲ್ಲಲು ಕೊನೇ ಅವಕಾಶವಾಗಿರುತ್ತದೆ.

ಕೋಟಾ ಸ್ಥಾನ ಗೆದ್ದ ಅಂಶು, ರೀತಿಕಾ

2021ರ ವಿಶ್ವ ಚಾಂಪಿಯನ್​ಷಿಪ್​ ರಜತ ವಿಜೇತೆ ಅಂಶು ಮಲಿಕ್​ ಟೋಕಿಯೊ ಗೇಮ್ಸ್​ ಬಳಿಕ ಸತತ 2ನೇ ಬಾರಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ್ದಾರೆ. ಅವರು 57 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಉಜ್ಬೇಕಿಸ್ತಾನದ ಲೇಲೊಖೋವಾ ಸೊಬೊಯಿರೋವಾ ವಿರುದ್ಧ ತಾಂತ್ರಿಕವಾಗಿ ಮೇಲುಗೈ ಸಾಧಿಸಿದರು. ರೀತಿಕಾ 76 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಚೀನಾ ತೈಪೆಯ ಹೊಯಿ ಜಿ ಚಾಂಗ್​ ವಿರುದ್ಧ 7-0ಯಿಂದ ಗೆಲ್ಲುವ ಸ್ವರ್ಣ ಪದಕ ಸ್ಪರ್ಧೆಗೆ ಅರ್ಹತೆ ಪಡೆದರು. ಕೂಟದಲ್ಲಿ ಫೈನಲ್​ ಪ್ರವೇಶಿಸಿದ ಕುಸ್ತಿಪಟುಗಳಿಗೆ ಒಲಿಂಪಿಕ್ಸ್​ ಕೋಟಾ ಸ್ಥಾನ ಒಲಿದುಬಂದಿತು. 62 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಮಾನ್ಸಿ ಅಹ್ಲಾವತ್​ ಸೋಲು ಕಾಣುವುದರೊಂದಿಗೆ ಸ್ವಲ್ಪದರಲ್ಲಿಯೇ ಒಲಿಂಪಿಕ್ಸ್​ ಪ್ರವೇಶ ತಪ್ಪಿಸಿಕೊಂಡರು. 68 ಕೆಜಿ ವಿಭಾಗದಲ್ಲಿ ನಿಶಾ ದಹಿಯಾ ಸೆಮೀಸ್​ಗೂ ಪ್ರವೇಶ ಗಿಟ್ಟಿಸಿಕೊಳ್ಳಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net