

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಫೈನಲ್ನಲ್ಲಿ ಎಡವಿದ ನೀರಜ್ 89.45 ಮೀಟರ್ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದು ಬೆಳ್ಳಿ ಗೆದ್ದರು. ಆದರೆ, ಕಳೆದ ಟೊಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದು ಗೊತ್ತೇ ಇದೆ. ಆದರೆ, ಈ ಬಾರಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ನಲ್ಲಿ ನೀರಜ್ 89.45 ಮೀಟರ್ ಎಸೆದರೆ, ಅರ್ಷದ್ ನದೀಮ್ 92.97 ಮೀಟರ್ ಎಸೆದು ದಾಖಲೆ ಬರೆಯುವ ಮೂಲಕ ಚಿನ್ನದ ಪದಕ ಗೆದ್ದರು. ಮೊದಲ ಪ್ರಯತ್ನದಲ್ಲಿ ಇಬ್ಬರೂ ಫೌಲ್ ಆದರು. ಇದನ್ನು ಎರಡನೇ ಪ್ರಯತ್ನದಲ್ಲಿ ಸಾಧಿಸಿದರು. ಆದರೆ, ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಬರುತ್ತಿವೆ. ಅವರಿಗೆ ಡೋಪ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ.
ನೀರಜ್ ಚೋಪ್ರಾ ಈ ಹಿಂದೆ ಟೋಕಿಯೊದಲ್ಲಿ 87.58 ಮೀಟರ್ ದೂರ ಎಸೆದು ಚಿನ್ನ ಗೆದ್ದಿದ್ದರು. ಈ ಬಾರಿ ನದೀಮ್ ಆ ದಾಖಲೆಯನ್ನು ಮುರಿದರು. ನದೀಮ್ 92.97 ಮೀಟರ್ ದೂರದಲ್ಲಿ ಜಾವೆಲಿನ್ ಎಸೆದರು. ಇದು ಒಲಿಂಪಿಕ್ಸ್ನಲ್ಲಿ ದಾಖಲೆಯಾಗಿದೆ. 2008ರ ಬೀಜಿಂಗ್ ಕ್ರೀಡಾಕೂಟದಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ನಿರ್ಮಿಸಿದ್ದ 90.57 ಮೀಟರ್ಗಳ ಒಲಿಂಪಿಕ್ ದಾಖಲೆಯನ್ನು ನದೀಮ್ ಹಿಂದಿಕ್ಕಿದರು.
ಇದೀಗ ಭಾರತೀಯ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನದೀಮ್ ಅವರ ಯಶಸ್ಸನ್ನು ಟೀಕಿಸುತ್ತಿದ್ದಾರೆ. ಅವರಿಗೆ ಡೋಪ್ ಪರೀಕ್ಷೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಡ್ರಗ್ಸ್ ಬಳಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. 92 ಮೀಟರ್ ದೂರದಲ್ಲಿ ಜಾವೆಲಿನ್ ಎಸೆಯಲು ಯಾರಿಂದಲೂ ಸಾಧ್ಯವಿಲ್ಲ. ಅರ್ಷದ್ರಿಂದ ಇದು ಹೇಗೆ ಸಾಧ್ಯವಾಯಿತು? ಖಂಡಿತ ಇಲ್ಲಿ ಏನೋ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಒಲಿಂಪಿಕ್ ಸಮಿತಿ ತನಿಖೆಗೆ ಆಗ್ರಹಿಸುತ್ತಿದೆ. ಎಕ್ಸ್ ಖಾತೆಯಲ್ಲಿ ಭಾರತೀಯ ಕ್ರೀಡಾಭಿಮಾನಿಗಳು ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್)