

ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಭರವಸೆ ಮೂಡಿದೆ. ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಅವರು 27 ಇನ್ನರ್ ಸರ್ಕಲ್ 10s ಒಳಗೊಂಡಂತೆ 580 ಅಂಕಗಳೊಂದಿಗೆ 3ನೇ ಸ್ಥಾನವನ್ನು ಪಡೆದರು. ಈ ಮೂಲಕ ಫೈನಲ್ ಸುತ್ತಿಗೆ ಲಗ್ಗೆಯಿಟ್ಟಿದ್ದು, ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ನಾಳೆ ಮಧ್ಯಾಹ್ನ 3.30ಕ್ಕೆ ಫೈನಲ್ ಸುತ್ತು ನಡೆಯಲಿದೆ.
ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರಂಭದಲ್ಲೇ ಹೊರಬಿದ್ದ ಆಘಾತದ ಮೂರು ವರ್ಷಗಳ ಬಳಿಕ ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆಯುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ನಾಳೆ ನಡೆಯಲಿರುವ ಫೈನಲ್‌ನಲ್ಲಿ ಅತ್ಯುತ್ತಮವಾದುದ್ದನ್ನು ನೀಡಿದರೆ ಭಾರತಕ್ಕೆ ಒಂದು ಪದಕ ಗ್ಯಾರಂಟಿಯಾಗಲಿದೆ.
ಇದೇ ದಿನ ಆರಂಭದಲ್ಲಿ ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರು ಕ್ರಮವಾಗಿ 9 ಮತ್ತು 18ನೇ ಸ್ಥಾನ ಪಡೆದು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. (ಏಜೆನ್ಸೀಸ್)