ರಶೀದ್​​ ಖಾನ್ ಸ್ಟೈಲ್​​ ಕಾಪಿ ಮಾಡಿದ ಪಾಕ್ ಕ್ರಿಕೆಟಿಗನಿಗೆ​ ಮುಖಭಂಗ! ಸಿಕ್ಕಾಪಟ್ಟೆ ಟ್ರೋಲ್​ ಆದ ಇಫ್ತಿಕರ್​

Rashid Khan
Published on

ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ನಾಯಕ ಹಾಗೂ ಸ್ಟಾರ್​ ಕ್ರಿಕೆಟರ್​ ರಶೀದ್ ಖಾನ್ ಅವರು ತಮ್ಮ ಲೆಗ್ ಸ್ಪಿನ್​ ಮ್ಯಾಜಿಕ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಅಲ್ಲದೆ, ಆಗೊಮ್ಮೆ ಈಗೊಮ್ಮೆ ತಮ್ಮಲ್ಲಿರುವ ಸ್ಪೋಟಕ ಬ್ಯಾಟ್ಸ್​​ಮನ್​ ರೂಪವನ್ನು ಪ್ರದರ್ಶಿಸುವ ಮೂಲಕ ತಾನೊಬ್ಬ ಆಲ್ ರೌಂಡರ್ ಆಟಗಾರ ಎಂಬುದನ್ನು ನೆನಪಿಸುತ್ತಾರೆ.

ರಶೀದ್ ಖಾನ್​ ಅವರು ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಕೆಲವು ಅದ್ಭುತ ಇನ್ನಿಂಗ್ಸ್‌ ಆಡಿದರು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ನೋ-ಲುಕ್ ಸಿಕ್ಸರ್‌ನೊಂದಿಗೆ ಇಡೀ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದರು. ಚೆಂಡನ್ನು ನೋಡದೆ ಸೂಪರ್ ಶಾಟ್‌ನಲ್ಲಿ ಸಿಕ್ಸರ್‌ ಸಿಡಿಸಿದರು. ಆದರೆ, ಇತ್ತೀಚೆಗಷ್ಟೇ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಇಫ್ತಿಕರ್ ಅಹ್ಮದ್ ಕೂಡ ಇದೇ ಹೊಡೆತವನ್ನು ಪ್ರಯತ್ನಿಸಿದರು. ಆದರೆ, ರಶೀದ್ ಖಾನ್ ಅವರಂತೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

ಗ್ಲೋಬಲ್​ ಟಿ20 ಕೆನಡಾ-2024 ಟೂರ್ನಿಯ ಅಂಗವಾಗಿ ಶುಕ್ರವಾರ ಬಾಂಗ್ಲಾ ಟೈಗರ್ಸ್ ಮಿಸಿಸೌಗಾ ಮತ್ತು ಮಾಂಟ್ರಿಯಲ್ ಟೈಗರ್ಸ್ ನಡುವೆ ಪಂದ್ಯ ನಡೆಯಿತು. ಒಂಟಾರಿಯೊದ ಸಿಎಎ ಸೆಂಟರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ತಂಡದ ಆಟಗಾರ ಇಫ್ತಿಕರ್ ಅಹ್ಮದ್ 24 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರು. ಆದರೆ, ಜಹೂರ್ ಖಾನ್ ಎಸೆದ ಇನಿಂಗ್ಸ್​ನ 18ನೇ ಓವರ್​ನ ಮೂರನೇ ಎಸೆತದಲ್ಲಿ ನೋ ಲುಕ್ ಶಾಟ್ ಆಡಿದರು. ಆ ಚೆಂಡ್​ ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಹೋಯಿತು. ಚೆಂಡ್​ ಸಿಕ್ಸರ್ ಹೋಗುತ್ತದೆ ಎಂಬ ವಿಶ್ವಾಸದಲ್ಲಿ ಇಫ್ತಿಕರ್​ ಇದ್ದರು. ಆದರೆ, ಚೆಂಡು ಗಾಳಿಯಲ್ಲಿ ತೂರಿ ಹೋಗಿ ನೇರವಾಗಿ ಫೀಲ್ಡರ್ ಕೈ ಸೇರಿತು. ಇದರಿಂದ ಇಫ್ತಿಕರ್ ಔಟ್​ ಆದರು.

ಇದೀಗ ರಶೀದ್ ಖಾನ್ ಹೊಡೆತ ಮತ್ತು ಇಫ್ತಿಕರ್​ ಹೊಡೆತವನ್ನು ಹೋಲಿಕೆ ಮಾಡಿ ಇಫ್ತಿಕರ್​ ಅವರನ್ನು ಕ್ರಿಕೆಟ್ ಅಭಿಮಾನಿಗಳು ಟ್ರೋಲ್​ ಮಾಡುತ್ತಿದ್ದಾರೆ. ಪಾಕಿಸ್ತಾನದಂತೆ ಅವರ ಕ್ರಿಕೆಟಿಗ ಆಟವೂ ಕೂಡ ಹೀನಾಯ ಸ್ಥಿತಿಯಲ್ಲಿದೆ ಎಂದು ಕಾಲೆಳೆಯುತ್ತಿದ್ದಾರೆ.

ಇನ್ನೂ ಈ ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಮಾಂಟ್ರಿಯಲ್ ಟೈಗರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಆಸ್ಟನ್ ಅಗರ್ 41, ಟಿಮ್ ಸ್ಕೀಫರ್ಟ್ 44, ದಿಲ್ ಪ್ರೀತ್ ಬಾಜ್ವಾ 41 ಮತ್ತು ಬೆನ್ 40 ರನ್ ಗಳಿಸಿದರು. ಬೆಂಗಾಲ್ ಟೈಗರ್ಸ್ ಬೌಲರ್​ಗಳ ಪೈಕಿ ಡೇವಿಡ್ ವೈಸ್ 3 ವಿಕೆಟ್ ಪಡೆದು ಮಿಂಚಿದರು. 190 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾ ಟೈಗರ್ಸ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 156 ರನ್ ಮಾತ್ರ ಗಳಿಸಿತು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 64 ರನ್ ಗಳಿಸಿದರು ಕೂಡ ಉಳಿದ ಬ್ಯಾಟ್ಸ್​ಮನ್​ಗಳು ವಿಫಲರಾಗಿ ಬಾಂಗ್ಲಾ ಟೈಗರ್ಸ್ ಸೋಲನುಭವಿಸಿತು. ಮಾಂಟ್ರಿಯಲ್ ಟೈಗರ್ಸ್ ತಂಡದ ಬೌಲರ್‌ಗಳ ಪೈಕಿ ಅಯಾನ್ ಅಫ್ಜಲ್ ಖಾನ್ 4 ವಿಕೆಟ್ ಪಡೆದು ಮಿಂಚಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net