Paris Olympic: ಬ್ರೇಕ್​ಅಪ್​ ನಡುವೆ ಚಿನ್ನಕ್ಕೆ ಮುತ್ತಿಕ್ಕಿದ ಜೆಕ್​ ಗಣರಾಜ್ಯದ ಜೋಡಿ!

web mixed
Published on

ಪ್ಯಾರಿಸ್​: ಪರಸ್ಪರ ಪ್ರೀತಿಸುತ್ತಿದ್ದ ಜೆಕ್​ ಗಣರಾಜ್ಯದ ಟೆನಿಸ್​ ತಾರೆಯರಾದ ಕ್ಯಾಟರಿನಾ ಸಿನಿಯಾಕೋವಾ ಮತ್ತು ಥಾಮಸ್​ ಮಚಾಕ್​ ಇತ್ತೀಚೆಗೆ ಬ್ರೇಕ್​ಅಪ್​ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ನಡುವೆಯೂ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಜತೆಯಾಗಿ ಕಣಕ್ಕಿಳಿದ ಸಿನಿಯಾಕೋವಾ-ಮಚಾಕ್​, ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

ಫೈನಲ್​ನಲ್ಲಿ ಚೀನಾದ ವಾಂಗ್​ ಕ್ಸಿನ್ಯು-ಝಂಗ್​ ಝಿಝೆನ್​ ಜೋಡಿಯನ್ನು 6-2, 5-7, 10-8ರಿಂದ ಮಣಿಸಿದ ಬಳಿಕ ಸಿನಿಯಾಕೋವಾ-ಮಚಾಕ್​ ಪರಸ್ಪರ ಆಲಿಂಗಿಸಿಕೊಂಡು ಚುಂಬಿಸಿದರು. ಇದರಿಂದ ಅವರ ಬ್ರೇಕ್​ಅಪ್​ ಸುದ್ದಿ ಸುಳ್ಳೇ ಎಂಬ ಪ್ರಶ್ನೆ ಎದುರಾಯಿತು. ಆದರೆ ಇದಕ್ಕೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಸಿನಿಯಾಕೋವಾ, ವೈಯಕ್ತಿಕ ಬದುಕಿನ ಬಗ್ಗೆ ಇಲ್ಲಿ ಮಾತನಾಡಲಾರೆ ಎಂದರು. ಸಿನಿಯಾಕೋವಾಗೆ ಇದು 2ನೇ ಒಲಿಂಪಿಕ್ಸ್​ ಚಿನ್ನವಾಗಿದೆ. ಕಳೆದ ಟೋಕಿಯೊ ಗೇಮ್ಸ್​ನಲ್ಲಿ ಅವರು ದೇಶಬಾಂಧವೆ ಬಾರ್ಬೊರಾ ಕ್ರೆಜಿಸಿಕೋವಾ ಜತೆ ಮಹಿಳಾ ಡಬಲ್ಸ್​ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net