ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಮೂರನೇ ದಿನ 30 ಪದಕ ಬೇಟೆಯಾಡಿದ ಭಾರತ

para web
Published on

ಹಾಂಗ್​ರೆೌ: ಭಾರತದ ಕ್ರೀಡಾಪಟುಗಳು ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಮೊದಲ ಮೂರು ದಿನಗಳಲ್ಲೇ ಪದಕಗಳ ಅರ್ಧಶತಕ ಬಾರಿಸಿದ್ದಾರೆ. ಬುಧವಾರ ನಡೆದ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಭಾರತ ಒಟ್ಟು 30 ಪದಕಗಳನ್ನು ಗೆದ್ದುಕೊಂಡಿತು. ಇದರಲ್ಲಿ 6 ಚಿನ್ನ, 8 ಬೆಳ್ಳಿ ಮತ್ತು 16 ಕಂಚಿನ ಪದಕಗಳು ಸೇರಿವೆ. ಇದರಿಂದ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಗೆದ್ದ ಒಟ್ಟು ಪದಕಗಳ ಸಂಖ್ಯೆ 64ಕ್ಕೇರಿದೆ. ಇದರಲ್ಲಿ 15 ಚಿನ್ನ, 20 ಬೆಳ್ಳಿ ಮತ್ತು 29 ಕಂಚಿನ ಪದಕಗಳು ಸೇರಿವೆ. ಭಾರತ ತಂಡ ಪದಕಪಟ್ಟಿಯಲ್ಲಿ ಪ್ರಸಕ್ತ 6ನೇ ಸ್ಥಾನದಲ್ಲಿದೆ. ಭಾರತ 2018ರಲ್ಲಿ 72 ಪದಕ ಗೆದ್ದಿದ್ದ ತನ್ನ ದಾಖಲೆ ಮುರಿಯುವ ಸನಿಹದಲ್ಲಿದೆ.

ಅಂಕುರ್​ ಧಾಮ ಪುರುಷರ 1,500 ಮೀ. ಓಟದ ಟಿ11 ವಿಭಾಗದಲ್ಲಿ ಚಿನ್ನ ಗೆದ್ದರು. ಮಂಗಳವಾರವಷ್ಟೇ 5,000 ಮೀ. ಓಟದಲ್ಲೂ ಚಿನ್ನ ಗೆದ್ದಿದ್ದ ಅವರು, ಒಂದೇ ಆವೃತ್ತಿಯ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಅವಳಿ ಚಿನ್ನ ಗೆದ್ದ ಮೊದಲ ಭಾರತೀಯ ಸಾಧಕ ಎನಿಸಿದರು. ಪುರುಷರ ಜಾವೆಲಿನ್​ ಎಸೆತದ ಎಫ್​46 ವಿಭಾಗದಲ್ಲಿ ಸುಂದರ್​ ಸಿಂಗ್​ ಗುರ್ಜರ್​ 68.60 ಮೀ. ದೂರದ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು. ರಿಂಕು (67.08ಮೀ) ಬೆಳ್ಳಿ, ಅಜೀತ್​ ಸಿಂಗ್​ (63.52) ಕಂಚು ಗೆಲ್ಲುವುದರೊಂದಿಗೆ ಭಾರತ ಈ ಸ್ಪರ್ಧೆಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಿತು. ಜಾವೆಲಿನ್​ ಎಸೆತದ ಎಫ್​37/38 ವಿಭಾಗದಲ್ಲಿ ಹನೀ ಮತ್ತು ಮಹಿಳೆಯರ ಲಾಂಗ್​ಜಂಪ್​ನ ಟಿ47 ವಿಭಾಗದಲ್ಲಿ ನಿಮಿಷ ಸುರೇಶ್​ ಚಿನ್ನಕ್ಕೆ ಮುತ್ತಿಟ್ಟರು.

ಶಾಟ್​ಪುಟ್​ ಎಫ್​57ನಲ್ಲಿ ರಾಣಾ ಸೋಮನ್​, ಡಿಸ್ಕಸ್​ ಥ್ರೋ ಎಫ್​54/55ನಲ್ಲಿ ಪೂಜಾ ಬೆಳ್ಳಿ ಜಯಿಸಿದರು. ಆರ್ಚರಿಯಲ್ಲಿ ಪುರುಷರ ಮತ್ತು ಮಹಿಳೆಯರ ಡಬಲ್ಸ್​ ಕಂಪೌಂಡ್​ನಲ್ಲಿ ಭಾರತ ರಜತಕ್ಕೆ ಗುರಿಯಿಟ್ಟಿತು. ಮಹಿಳೆಯರ ಪವರ್​ಲಿಫ್ಟಿಂಗ್​ನಲ್ಲಿ ಜೈನಾಬ್​ ಖತೂನ್​ ಮತ್ತು ರಾಜ್​ ಕುಮಾರಿ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದುಕೊಂಡರು. ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ 6 ಕಂಚು ಒಲಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net