2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಪ್ಯಾನ್​ ಇಂಡಿಯಾ ಯೋಜನೆ; ಅಹಮದಾಬಾದ್​ ಮುಖ್ಯ ಕೇಂದ್ರ, ಮುಂಬೈನಲ್ಲಿ ಕ್ರಿಕೆಟ್​, ಭುವನೇಶ್ವರದಲ್ಲಿ ಹಾಕಿ?

web oly
Published on

ನವದೆಹಲಿ: ಈಗಾಗಲೆ 2036ರ ಒಲಿಂಪಿಕ್ಸ್​ ಆತಿಥ್ಯದ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಭಾರತ, ಇದೀಗ ಜಾಗತಿಕ ಕ್ರೀಡಾಕೂಟದ ಆಯೋಜನೆಗಾಗಿ ಪ್ಯಾನ್​ ಇಂಡಿಯಾ ಮಾದರಿಯ ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಇದರನ್ವಯ 2036ರ ಒಲಿಂಪಿಕ್ಸ್​ ಆತಿಥ್ಯ ಭಾರತಕ್ಕೆ ಲಭಿಸಿದರೆ, ಗುಜರಾತ್​ನ ಅಹಮದಾಬಾದ್​ ಮುಖ್ಯ ಕೇಂದ್ರವಾಗಿರಲಿದೆ ಮತ್ತು ಅಲ್ಲೇ ಕ್ರೀಡಾಕೂಟದ ಪ್ರಮುಖ ಸ್ಪರ್ಧೆಗಳೆಲ್ಲ ನಡೆಯಲಿವೆ. ಜತೆಗೆ ಮುಂಬೈನಲ್ಲಿ ಕ್ರಿಕೆಟ್​, ಭುವನೇಶ್ವರದಲ್ಲಿ ಹಾಕಿ, ಪುಣೆಯಲ್ಲಿ ಕನೋಯಿಂಗ್​&ಕಯಾಕಿಂಗ್​ ಮತ್ತು ಭೋಪಾಲ್​ನಲ್ಲಿ ರೋಯಿಂಗ್​ ಸ್ಪರ್ಧೆಯನ್ನು ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ.

ಭಾರತೀಯ ಒಲಿಂಪಿಕ್ಸ್​ ಸಂಸ್ಥೆ (ಐಒಎ) ಕಳೆದ ವರ್ಷ ಅಕ್ಟೋಬರ್​ನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್​ ಕೌನ್ಸಿಲ್​ಗೆ (ಐಒಸಿ) 2036ರ ಒಲಿಂಪಿಕ್ಸ್​ ಆತಿಥ್ಯದ "ಉದ್ದೇಶ ಪತ್ರ'ವನ್ನು ಸಲ್ಲಿಸುವ ಮೂಲಕ ಮೊದಲ ಹೆಜ್ಜೆ ಇಟ್ಟಾಗಿದೆ. ಅದಕ್ಕೆ ಮುನ್ನ 2023ರಲ್ಲಿ ಮುಂಬೈನಲ್ಲಿ ನಡೆದ ಐಒಸಿಯ 141ನೇ ಅಧಿವೇಶನದಲ್ಲೇ ಪ್ರಧಾನಿ ನರೇಂದ್ರ ಮೋದಿ, ಒಲಿಂಪಿಕ್ಸ್​ ಆತಿಥ್ಯದ ಕನಸು ಹಂಚಿಕೊಂಡಿದ್ದರು. ಇನ್ನು ಭಾರತ ಶ್ರೀದಲ್ಲೇ ತನ್ನ "ಪ್ಯಾನ್​ ಇಂಡಿಯಾ' ಒಲಿಂಪಿಕ್ಸ್​ ಆತಿಥ್ಯದ ಯೋಜನೆಯನ್ನೂ ಶ್ರೀದಲ್ಲೇ ಐಒಸಿ ಜತೆಗೆ ಹಂಚಿಕೊಳ್ಳಲಿದೆ ಎನ್ನಲಾಗಿದೆ.

ಒಲಿಂಪಿಕ್ಸ್​ ಕೇವಲ ಗುಜರಾತ್​ಗೆ ಸೀಮಿತವಾಗದೆ, ಇಡೀ ದೇಶವೇ ಇದರಲ್ಲಿ ಒಳಗೊಳ್ಳುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ. ನಾವು ಶ್ರೀದಲ್ಲೇ ಈ ಯೋಜನೆಯ ರೂಪುರೇಷೆಯನ್ನು ಅಂತಿಮಗೊಳಿಸಿ ಐಒಸಿ ಎದುರು ಮಂಡಿಸಲಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಹಮದಾಬಾದ್​ನಲ್ಲಿ ನರನ್​ಪುರ ಕ್ರೀಡಾ ಸಂಕೀರ್ಣದ ಕಾಮಗಾರಿ ಸದ್ಯ ಭರದಿಂದ ಸಾಗುತ್ತಿದ್ದು, ಇದು ಪೂರ್ಣಗೊಂಡ ಬಳಿಕ, ಒಲಿಂಪಿಕ್ಸ್​ ಆತಿಥ್ಯದ ಮಹತ್ವಾಕಾಂಕ್ಷೆಯೊಂದಿಗೆ ಸಿದ್ಧವಾಗುತ್ತಿರುವ ಅಹಮದಾಬಾದ್​ನ ಇನ್ನೆರಡು ಪ್ರಧಾನ ಕ್ರೀಡಾಕೇಂದ್ರಗಳಾದ ಸರ್ದಾರ್​ ವಲ್ಲಭಾಭಾಯ್​ ಪಟೇಲ್​ (ಎಸ್​ವಿಪಿ) ಕ್ರೀಡಾ ಎನ್​ಕ್ಲೇವ್​ ಮತ್ತು ಕರೈ ಸ್ಪೋರ್ಟ್ಸ್​ ಹಬ್​ನಂಥ ಗಮನ ಕೇಂದ್ರೀಕರಿಸಲಾಗುವುದು. 355 ಎಕರೆ ಪ್ರದೇಶದ ಎಸ್​ವಿಪಿ ಎನ್​ಕ್ಲೇವ್​, ವಿಶ್ವದ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿರುವ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದ ಪಕ್ಕದಲ್ಲೇ ಇದೆ. 143 ಎಕರೆಯ ಕರೈ ಸ್ಪೋರ್ಟ್ಸ್​ ಹಬ್​, ಸಾಬರಮತಿ ನದಿಯ ಎದುರಿನಲ್ಲಿದೆ. ಒಲಿಂಪಿಕ್ಸ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆಯನ್ನು 35 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಕರೈ ಸ್ಪೋರ್ಟ್ಸ್​ ಹಬ್​ನಲ್ಲಿ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕರೈ ಪೊಲೀಸ್​ ಅಕಾಡೆಮಿಯಲ್ಲಿ ಶೂಟಿಂಗ್​ ಸ್ಪರ್ಧೆ ನಡೆಸುವ ಯೋಜನೆ ಇದೆ. ಅಹಮದಾಬಾದ್​ನ ಈ ಕ್ರೀಡಾ ಸೌಕರ್ಯ ಅಭಿವೃದ್ಧಿಯ ಯೋಜನೆ ಪೂರ್ಣಗೊಳಿಸಲು 2028ರ ಗಡುವು ಹಾಕಿಕೊಳ್ಳಲಾಗಿದೆ.

1951 ಮತ್ತು 1982ರ ಏಷ್ಯನ್​ ಗೇಮ್ಸ್​, 2008ರ ಕಾಮನ್ವೆಲ್ತ್​ ಯೂಗ್​ ಗೇಮ್ಸ್​ ಮತ್ತು 2010ರ ಕಾಮನ್ವೆಲ್ತ್​ ಗೇಮ್ಸ್​ ಭಾರತದಲ್ಲಿ ಈ ಹಿಂದೆ ನಡೆದಿರುವ ಪ್ರಮುಖ ಬಹುಕ್ರೀಡಾ ಜಾಗತಿಕ ಸ್ಪರ್ಧೆಗಳಾಗಿವೆ. ಒಲಿಂಪಿಕ್ಸ್​ಗೆ ಮುನ್ನ ಭಾರತದಲ್ಲಿ 2028ರ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​, 2028ರ ಏಷ್ಯನ್​ ಈಜು ಚಾಂಪಿಯನ್​ಷಿಪ್​, 2030ರ ಯೂತ್​ ಒಲಿಂಪಿಕ್ಸ್​ ಮತ್ತು ವಿಶ್ವ ಪೊಲೀಸ್​&ಮಿಲಿಟರಿ ಗೇಮ್ಸ್​ ಆಯೋಜಿಸುವ ಯೋಜನೆಯೂ ಇದೆ.

ಕ್ರೀಡಾ ಸೌಕರ್ಯಕ್ಕೆ 6 ಸಾವಿರ ಕೋಟಿ ರೂ.

ಒಲಿಂಪಿಕ್ಸ್​ ಆತಿಥ್ಯದ ಮಹತ್ವಾಕಾಂಕ್ಷೆಯೊಂದಿಗೆ ಅಹಮದಾಬಾದ್​ನಲ್ಲಿ ಈಗಾಗಲೆ 6 ಸಾವಿರ ಕೋಟಿ ರೂ. ವೆಚ್ಚದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯ ಯೋಜನೆ ಜಾರಿಯಲ್ಲಿದೆ. ಇದರ ಮೊದಲ ಭಾಗವಾಗಿ ನರನ್​ಪುರ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಈಜು, ಕುಸ್ತಿ, ಟೇಬಲ್​ ಟೆನಿಸ್​, ಜಿಮ್ನಾಸ್ಟಿಕ್ಸ್​, ವಾಲಿಬಾಲ್​ ಮತ್ತು ಬ್ಯಾಡ್ಮಿಂಟನ್​ನಂಥ 6 ಪ್ರಮುಖ ಒಲಿಂಪಿಕ್ಸ್​ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಬಹುದಾಗಿದೆ. ಇದು ಮಾರ್ಚ್​ನಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ. "ಭಾರತಕ್ಕೆ ಒಲಿಂಪಿಕ್ಸ್​ ಬಿಡ್​ ಯಶಸ್ವಿಯಾದರೂ, ಆಗದಿದ್ದರೂ ಈ ಯೋಜನೆ ಪೂರ್ಣಗೊಳ್ಳಲಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ. ನರನ್​ಪುರ ಕ್ರೀಡಾ ಸಂಕೀರ್ಣ ಒಟ್ಟು 20.39 ಎಕರೆ ಪ್ರದೇಶದಲ್ಲಿ 631.77 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಬಾಸ್ಕೆಟ್​ಬಾಲ್​, ಕಬಡ್ಡಿ, ಟೇಕ್ವಾಂಡೊ ಸ್ಪರ್ಧೆಗಳನ್ನೂ ನಡೆಸಬಹುದಾಗಿದೆ. ಕ್ರೀಡಾ ಶ್ರೇಷ್ಠತಾ ಕೇಂದ್ರವನ್ನೂ ಇದು ಒಳಗೊಂಡಿರಲಿದೆ.

ನಿಕಟ ಪ್ರತಿಸ್ಪರ್ಧೆ ನಿರೀಕ್ಷೆ

ಐಒಎ ಅಧ್ಯೆ ಪಿಟಿ ಉಷಾ ಮತ್ತು ಕಾರ್ಯಕಾರಿ ಸಮಿತಿ ನಡುವಿನ ಒಡಕು ಭಾರತಕ್ಕೆ ಒಲಿಂಪಿಕ್ಸ್​ ಆತಿಥ್ಯದ ನಿಟ್ಟಿನಲ್ಲಿ ಆಂತರಿಕ ಸಮಸ್ಯೆಯಾಗಿದೆ. ಯಾಕೆಂದರೆ ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕಿಂತ ಐಒಸಿ ಜತೆಗೆ ಐಒಎ ವ್ಯವಹರಿಸುವ ರೀತಿಯೇ ಒಲಿಂಪಿಕ್ಸ್​ ಬಿಡ್​ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದಲ್ಲದೆ 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಕತಾರ್​ ಮತ್ತು ಸೌದಿ ಅರೇಬಿಯಾ ಕೂಡ ಪ್ರಮುಖ ಆಕಾಂಯಾಗಿದ್ದು, ಅವು ಆರ್ಥಿಕವಾಗಿಯೂ ಬಲಿಷ್ಠವಾಗಿರುವುದು ನಿಕಟ ಪೈಪೋಟಿಗೆ ಕಾರಣವಾಗಲಿದೆ. ಐಒಸಿ ಪ್ರಕಾರ, ಇದುವರೆಗೆ ಕನಿಷ್ಠ 10 ದೇಶಗಳು 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಆಸಕ್ತಿ ತೋರಿವೆ. ಆದರೆ 2036ರ ಒಲಿಂಪಿಕ್ಸ್​ ಆತಿಥೇಯ ದೇಶದ ಘೋಷಣೆ 2026ಕ್ಕಿಂತ ಮುನ್ನ ಆಗುವ ಸಾಧ್ಯತೆ ಇಲ್ಲ.

*ನಾವು ನೇರವಾಗಿ ಒಲಿಂಪಿಕ್ಸ್​ ಆತಿಥ್ಯಕ್ಕೆ ಹಾತೊರೆಯುತ್ತಿದ್ದೇವೆ ಎಂದಲ್ಲ. ನಾವು ನಮ್ಮ ಆತಿಥ್ಯದ ಸಾಮರ್ಥ್ಯವನ್ನು ಪರೀಸಲು ಮತ್ತು ಜಾಗತಿಕ ಕ್ರೀಡಾಕೂಟವನ್ನು ಹೇಗೆ ಆಯೋಜಿಸುವುದು ಎಂಬುದನ್ನು ಕಲಿತುಕೊಳ್ಳಲು ಬಯಸಿದ್ದೇವೆ. ಭಾರತಕ್ಕೆ ಒಲಿಂಪಿಕ್ಸ್​ ಆತಿಥ್ಯ ಸಿಕ್ಕರೂ, ಸಿಗದಿದ್ದರೂ ಈ ಕ್ರೀಡಾ ಸೌಕರ್ಯಗಳ ಯೋಜನೆ ಪೂರ್ಣಗೊಳ್ಳಲಿವೆ. ಒಲಿಂಪಿಕ್ಸ್​ ಒಂದೇ ನಮ್ಮ ಗುರಿ ಅಲ್ಲ. ಆದರೆ ಅದು ನಮ್ಮ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಪ್ರೇರಣೆ ತುಂಬಲಿದೆ.

| ಗುಜರಾತ್​ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net