

ನವದೆಹಲಿ: ಭಾರತೀಯ ಕ್ರಿಕೆಟ್ನ ಶ್ರೀಮಂತಿಕೆಗಿಂತ ಪಾಕಿಸ್ತಾನ ಕ್ರಿಕೆಟ್ ಎಷ್ಟೊಂದು ಬಡವಾಗಿದೆ ಎಂದು ನಿರೂಪಿಸುವ ಅಂಕಿ-ಅಂಶಗಳು ಹೊರಬಿದ್ದಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತ್ತೀಚೆಗೆ 18 ಕ್ರಿಕೆಟಿಗರಿಗೆ ಕೇಂದ್ರೀಯ ಗುತ್ತಿಗೆಯನ್ನು ನೀಡಿತ್ತು. ಇದರ ಒಟ್ಟು ಮೊತ್ತವು, ಬಿಸಿಸಿಐ ಭಾರತದ ಇಬ್ಬರು ಅಗ್ರ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರಿಬ್ಬರಿಗೆ ನೀಡಿರುವ ಕೇಂದ್ರಿಯ ಗುತ್ತಿಗೆ ಮೊತ್ತಕ್ಕೆ ಸಮನಲ್ಲ! ಅದರಲ್ಲೂ ಈ ಇಬ್ಬರು ಕ್ರಿಕೆಟಿಗರ ವೈಯಕ್ತಿಕ ಗುತ್ತಿಗೆ ಮೊತ್ತಕ್ಕಿಂತ ಕೇವಲ 40 ಲಕ್ಷ ರೂ. ನಷ್ಟು ಮಾತ್ರ ಅಧಿಕವಾಗಿದೆ!
ಪಿಸಿಬಿ ಕಳೆದ ಮೇನಲ್ಲಿ 2020-21ರ ಸಾಲಿನ ಕೇಂದ್ರಿಯ ಗುತ್ತಿಗೆಯನ್ನು ಪ್ರಕಟಿಸಿತ್ತು. ಇದರ ಒಟ್ಟು ಮೊತ್ತ 7.4 ಕೋಟಿ ರೂ. ಆಗಿದೆ. ಬಿಸಿಸಿಐ ಕಳೆದ ವರ್ಷ 2020ರ ಸಾಲಿನ ಕೇಂದ್ರ ಗುತ್ತಿಗೆಯನ್ನು ಭಾರತೀಯ ಕ್ರಿಕೆಟಿಗರಿಗೆ ಪ್ರಕಟಿಸಿತ್ತು. ಈ ಪೈಕಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಜಸ್ಪ್ರೀತ್ ಬುಮ್ರಾಗೆ ಎ ಪ್ಲಸ್ ಗುತ್ತಿಗೆ ನೀಡಿತ್ತು. ಇದರ ಮೌಲ್ಯ 7 ಕೋಟಿ ರೂ. ಹೀಗಾಗಿ ಕೊಹ್ಲಿ-ರೋಹಿತ್ ಅವರ ಒಟ್ಟು ಸಂಭಾವನೆ 14 ಕೋಟಿ ರೂ. ಆಗುತ್ತದೆ. ಪಾಕಿಸ್ತಾನ ಕ್ರಿಕೆಟಿಗರಿಗೆ ನೀಡಿರುವ ಒಟ್ಟು ಮೊತ್ತದ ಸರಿಸುಮಾರು ದುಪ್ಪಟ್ಟು ಮೊತ್ತ ಇದಾಗಿದೆ.
ಪಿಸಿಬಿ ತನ್ನ ಗುತ್ತಿಗೆ ಪಟ್ಟಿಯಲ್ಲಿ ನಾಯಕ ಬಾಬರ್ ಅಜಮ್, ಅಜರ್ ಅಲಿ ಮತ್ತು ಶಹೀನ್ ಷಾ ಅಫ್ರಿದಿಗೆ ಎ ಶ್ರೇಣಿ ನೀಡಿತ್ತು. ಇದರ ಮೌಲ್ಯ 60 ಲಕ್ಷ ರೂಪಾಯಿ. ಬಿ ಶ್ರೇಣಿಯಲ್ಲಿರುವ ಅಸದ್ ಶಫಿಕ್, ಹ್ಯಾರಿಸ್ ಸೋಹೈಲ್, ಮೊಹಮದ್ ಅಬ್ಬಾಸ್ ಮತ್ತು ಇತರ 6 ಆಟಗಾರರ ವಾರ್ಷಿಕ ಸಂಭಾವನೆ 41 ಲಕ್ಷ ರೂಪಾಯಿ. ಇನ್ನು ಸಿ ಶ್ರೇಣಿಯಲ್ಲಿರುವ 6 ಆಟಗಾರರ ವಾರ್ಷಿಕ ಸಂಭಾವನೆ 30 ಲಕ್ಷ ರೂಪಾಯಿ.
ಅತ್ತ ಪಾಕಿಸ್ತಾನ ಗರಿಷ್ಠ ಗುತ್ತಿಗೆಯೇ ಲಕ್ಷ ರೂ. ಲೆಕ್ಕಾಚಾರದಲ್ಲಿದ್ದರೆ, ಭಾರತೀಯ ಕ್ರಿಕೆಟಿಗರ ಸಿ ಶ್ರೇಣಿಯ ಗುತ್ತಿಗೆಯೂ ಕೋಟಿ ರೂಪಾಯಿ ಲೆಕ್ಕಕ್ಕಿಂತ ಕಡಿಮೆ ಇಲ್ಲ. ಭಾರತದ ಎ ಶ್ರೇಣಿಯ ಗುತ್ತಿಗೆ ಆಟಗಾರರು ವಾರ್ಷಿಕ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರೆ, ಬಿ ಮತ್ತು ಸಿ ಶ್ರೇಣಿ ಕ್ರಿಕೆಟಿಗರು ಕ್ರಮವಾಗಿ 3 ಮತ್ತು 1 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಭಾರತದ ಕೆಲ ಕ್ರಿಕೆಟಿಗರು ಐಪಿಎಲ್ನಲ್ಲಿ ಪಡೆಯುತ್ತಿರುವ ಸಂಭಾವನೆಗೆ ಹೋಲಿಸಿದರೂ, ಸಂಪೂರ್ಣ ಪಾಕಿಸ್ತಾನ ತಂಡ ವಾರ್ಷಿಕ ಸಂಭಾವನೆ ಸಾಟಿ ಎನಿಸುವುದಿಲ್ಲ.