

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಭಾರತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಶ್ವಾದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದು ತೀವ್ರ ಮುಖಭಂಗವನ್ನು ಅನುಭವಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದ ಗೆಲುವು ನುಂಗಲಾರದ ತುತ್ತಾಗಿದ್ದು, ಇದೀಗ ಪಾಕ್ ಕ್ರಿಕೆಟ್ ತಂಡದ ವೇಗಿ ಶಾಹೀನ್ ಅಫ್ರಿದಿ ಟೀಮ್ ಇಂಡಿಯಾಗೆ ಶುಭ ಕೋರಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ನಾನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಿದೆ ಮತ್ತು ಪ್ರತಿ ಕ್ಷಣವನ್ನು ಆನಂದಿಸಿದೆ. ಎರಡು ತಂಡಗಳು ಉತ್ತಮವಾಗಿ ಆಡಿದವು. ಫೈನಲ್ ಪಂದ್ಯದ ವೇಳೆ ಅಂತಿಮವಾಗಿ ಯಾವ ತಂಡ ಒತ್ತಡವನ್ನು ನಿಭಾಯಿಸುತ್ತದೆ. ಆ ತಂಡ ಕಪ್ ಎತ್ತಿ ಹಿಡಿಯುತ್ತದೆ ಎಂಬುದಕ್ಕೆ ಭಾರತದ ಪ್ರದರ್ಶನವೇ ಸಾಕ್ಷಿ. ಭಾರತವು ಉತ್ತಮ ಬ್ರಾಂಡ್ ಕ್ರಿಕೆಟ್ ಅನ್ನು ಆಡಿದೆ ಮತ್ತು ಗೆಲ್ಲಲು ಅರ್ಹವಾಗಿತ್ತು.
ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳು ಭಾಗವಹಿಸುತ್ತವೆ ಮತ್ತು ಒಂದು ಸುದೀರ್ಘ ಪ್ರಕ್ರಿಯೆಯ ನಂತರ ಹೊರಬರುತ್ತವೆ. ಕೆಲವೊಂದು ವಿಷಯಗಳನ್ನು ಸರಿಪಡಿಸಬೇಕಿದ್ದು, ನಾವು ಕಷ್ಟಪಟ್ಟು ಕೆಲಸ ಮಾಡಿದಾಗ ಅದೃಷ್ಟ ನಮ್ಮ ಕೈ ಹಿಡಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಉತ್ತಮವಾಗಿರುವುದನ್ನೇ ನೀಡುತ್ತೇವೆ ಎಂದು ಪಾಕ್ ತಂಡದ ಪ್ರದರ್ಶನದ ಕುರಿತು ವೇಗಿ ಶಾಹೀನ್ ಅಫ್ರಿದಿ ಹೇಳಿದ್ದಾರೆ.