ತವರಿನತ್ತ ಟಿ-20 ವಿಶ್ವಚಾಂಪಿಯನ್ಸ್​​; ಪ್ರಧಾನಿ-ಅಭಿಮಾನಿಗಳ ಭೇಟಿಗೆ ಟೈಮ್​ ಫಿಕ್ಸ್

Team India
Published on

ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಟೀಮ್​ ಇಂಡಿಯಾ ಬಾರ್ಬಡೋಸ್​ನಿಂದ ಭಾರತಕ್ಕೆ ಮರಳುತ್ತಿದ್ದು, ಈ ಬಗ್ಗೆ ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. ಭಾರತದ ಆಟಗಾರರು ವಿಮಾನದಲ್ಲಿ ಕಪ್​ನೊಂದಿಗೆ ತವರಿಗೆ ಮರಳುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಬುಧವಾರ (ಜುಲೈ 03) ಭಾರತದತ್ತ ಹೊರಟಿರುವ ಆಟಗಾರರು, ಸಿಬ್ಬಂದಿ ಹಾಗೂ ಅವರ ಕುಟುಂಬದವರು ಗುರುವಾರ (ಜುಲೈ 04) ಬೆಳಗ್ಗೆ ನವದೆಹಲಿಗೆ ಬಂದಿಳಿಯಲಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಘೋಷಣೆಯೊಂದನ್ನು ಮಾಡಿದ್ದು, ಅಭಿಮಾನಿಗಳು ವಿಶ್ವಕಪ್​ ವಿಜೇತ ತಂಡದ ಆಟಗಾರರನ್ನು ಭೇಟಿ ಮಾಡಬಹುದಾಗಿದೆ.

ಗುರುವಾರ (ಜುಲೈ 04) ಟೀಮ್​ ಇಂಡಿಯಾ ಆಟಗಾರರಿರುವ ವಿಮಾನ ನವದೆಹಲಿಗೆ ಬಂದಿಳಿಯಲಿದ್ದು, ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಜುಲೈ 4, ಬೆಳಗ್ಗೆ 11 ಗಂಟೆಗೆ ಭಾರತ ತಂಡ, ನರೇಂದ್ರ ಮೋದಿ ನಿವಾಸಕ್ಕೆ ಭೇಟಿ ನೀಡಲಿದ್ದು, ಆ ಬಳಿಕ ಮುಂಬೈನಲ್ಲಿ ನಡೆಯಲಿರುವ ರೋಡ್​ ಶೋನಲ್ಲಿ ಭಾಗಿಯಾಗಲು ಆಟಗಾರರು ತೆರಳಲಿದ್ದಾರೆ.

ಟೀಮ್​ ಇಂಡಿಯಾ ವಿಜಯೋತ್ಸವವನ್ನು ಆಚರಿಸಲು ಜುಲೈ 04 ಸಂಜೆ 05 ಗಂಟೆಗೆ ಮುಂಬೈನ ಮರೈನ್​ ಡ್ರೈವ್​ನಿಂದ ವಾಂಖೆಡೆವರೆಗೂ ವಿಜಯೋತ್ಸವ ಯಾತ್ರಯನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಟೀಮ್​ ಇಂಡಿಯಾ ಆಟಗಾರರು ಭಾಗಿಯಾಗಲಿದ್ದಾರೆ. ಈ ಬಗ್ಗೆ ಸ್ವತಃ ನಾಯಕ ರೋಹಿತ್​ ಶರ್ಮಾ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಪೋಸ್ಟ್​​ ಮಾಡಿದ್ದಾರೆ. ವಿಶ್ವಕಪ್​ ವಿಜೇತ ತಂಡದ ಆಟಗಾರರನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net