1983ರ ಪಾಕಿಸ್ತಾನ ಹಾಕಿ ತಂಡ ಸ್ಮಗ್ಲಿಂಗ್ ಮಾಡಿತ್ತು!

Hockey-India-League_WEB
Published on

ಕರಾಚಿ: ಲಾಕ್‌ಡೌನ್ ಸಮಯದಲ್ಲಿ ಕ್ರಿಕೆಟಿಗರು ವೃತ್ತಿಜೀವನದ ಹಲವು ರೋಚಕ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದರೆ, ಪಾಕಿಸ್ತಾನದ ಮಾಜಿ ಆಟಗಾರರೊಬ್ಬರು ಸ್ಫೋಟಕ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ, 1983ರಲ್ಲಿ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಅಮೂಲ್ಯ ವಸ್ತುಗಳನ್ನು ಸ್ಮಗ್ಲಿಂಗ್ ಮಾಡುತ್ತಿದ್ದರು ಎಂದು!

ಪಾಕಿಸ್ತಾನ ಹಾಕಿ ತಂಡದ ಮಾಜಿ ನಾಯಕ ಹನೀಫ್​ ಖಾನ್, ತಮ್ಮ ಮಾಜಿ ಸಹ-ಆಟಗಾರರ ಮೇಲೆ ಇಂಥದ್ದೊಂದು ಆರೋಪವನ್ನು ಮಾಡಿದ್ದಾರೆ. 1983ರಲ್ಲಿ ಹಾಂಕಾಂಗ್ ಪ್ರವಾಸದಿಂದ ಮರಳುವ ವೇಳೆ ತಮ್ಮ ನಾಯಕತ್ವದ ತಂಡದ ಆಟಗಾರರು ಸ್ಮಗ್ಲಿಂಗ್ ಮಾಡಿದ್ದರೆಂದು ಅವರು ಹೇಳಿದ್ದಾರೆ. ತಂಡದ ಕೆಲ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದರು ಎಂದಿದ್ದಾರೆ.

‘1983ರಲ್ಲಿ ಹಾಂಕಾಂಗ್‌ನಲ್ಲಿ ಅಂತಾರಾಷ್ಟ್ರೀಯ ಟೂರ್ನಿಯೊಂದನ್ನು ಆಡಿ ನಾವು ತವರಿಗೆ ಮರಳುವಾಗ ತಂಡದ ಕೆಲ ಆಟಗಾರರು ಕಾರಿನ ಬಿಡಿಭಾಗಗಳು, ವಿಸಿಆರ್‌ಗಳು, ಗ್ಲಾಸ್ ಫ್ರೇಮ್​‌ಗಳನ್ನು ಕಳ್ಳಸಾಗಣೆ ಮಾಡಿದ್ದರು. ಆ ದಿನಗಳಲ್ಲಿ ಅವುಗಳಿಗೆ ನಿಷೇಧವಿತ್ತು. ಆದರೆ ಆಟಗಾರರು ತಮ್ಮ ಲಗೇಜುಗಳಲ್ಲಿ ಅವುಗಳನ್ನು ತಂದಿದ್ದರು. ಆ ಕಳ್ಳಸಾಗಣೆಯ ವಸ್ತುಗಳ ಮೌಲ್ಯ ಸುಮಾರು 15 ದಶಲಕ್ಷ ರೂಪಾಯಿ ಇರಬಹುದು. ಬಳಿಕ ಕಸ್ಟಮ್ಸ್ ಅಧಿಕಾರಿಗಳಿಂದ ತನಿಖೆ ನಡೆದಾಗ ತಂಡದ ಕೆಲ ಆಟಗಾರರು ಮತ್ತು ಅಧಿಕಾರಿಗಳು ಸ್ಮಗ್ಲಿಂಗ್ ರಾಕೆಟ್‌ನಲ್ಲಿ ಒಳಗೊಂಡಿದ್ದು ಪತ್ತೆಯಾಗಿತ್ತು. ಬಳಿಕ ಈ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು’ ಎಂದು 61 ವರ್ಷದ ಹನೀಫ್​ ಖಾನ್ ಜಿಯೋ ಟಿವಿ ಜತೆ ಮಾತನಾಡುತ್ತ ವಿವರಿಸಿದ್ದಾರೆ.

1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದ ಪಾಕಿಸ್ತಾನ ತಂಡದ ಆಟಗಾರರಾಗಿರುವ ಹನೀಫ್​ ಖಾನ್, ಪಾಕ್ ಹಾಕಿ ತಂಡಕ್ಕೆ ಕೋಚ್ ಮತ್ತು ಮ್ಯಾನೇಜರ್ ಕೂಡ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net