

ಲಾಹೋರ್: ಕಳೆದ 3 ಒಲಿಂಪಿಕ್ಸ್ಗಳಿಗೆ ಅರ್ಹತೆಯನ್ನೇ ಗಳಿಸಲು ವಿಫಲವಾಗಿ ದು:ಸ್ಥಿತಿಗೆ ತಲುಪಿರುವ ಪಾಕಿಸ್ತಾನದ ಹಾಕಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಲಿದ ಕಂಚಿನ ಪದಕ ತುಸು ಆಕ್ಸಿಜನ್ ತುಂಬಿದೆ. ಹೀಗಾಗಿ ಪಾಕಿಸ್ತಾನ ಹಾಕಿ ಒಕ್ಕೂಟ (ಪಿಎಚ್ಎಫ್) ತಂಡದ ಎಲ್ಲ ಆಟಗಾರರಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಆದರೆ ಪಿಎಚ್ಎಫ್ ಸದ್ಯ ಬಡತನದಲ್ಲಿರುವುದರಿಂದ ಆಟಗಾರರಿಗೆ ಜುಜುಬಿ ಮೊತ್ತದ ಬಹುಮಾನವಷ್ಟೇ ಲಭಿಸಿದೆ.
ಕಂಚಿನ ಪದಕ ವಿಜೇತ ಪಾಕ್ ಹಾಕಿ ತಂಡದ ಎಲ್ಲ ಆಟಗಾರರಿಗೆ ತಲಾ 100 ಡಾಲರ್ ಅಂದರೆ 8,370 ರೂಪಾಯಿ (28 ಸಾವಿರ ಪಾಕಿಸ್ತಾನಿ ರೂಪಾಯಿ) ಬಹುಮಾನ ನೀಡಲು ಪಿಎಚ್ಎಫ್ ನಿರ್ಧರಿಸಿದೆ. ಇದು ಪಾಕಿಸ್ತಾನ ಹಾಕಿಯ ಬಡತನಕ್ಕೂ ಸಾಕ್ಷಿಯಾಗಿದೆ.
ಪಾಕ್ ತಂಡದ ಆಟಗಾರ ಘಜನ್ರ್ ಅಲಿ, ತನ್ನ ತಂದೆ ನಿಧನ ಹೊಂದಿದ ನಡುವೆಯೂ ಟೂರ್ನಿಯಲ್ಲಿ ಆಟ ಮುಂದುವರಿಸಿದ್ದರು. ಹೀಗಾಗಿ ಪಿಎಚ್ಎಫ್ ಈ ಕಂಚಿನ ಪದಕ ಗೆಲುವನ್ನು ಘಜನ್ರ್ಗೆ ಅರ್ಪಿಸಲು ನಿರ್ಧರಿಸಿದೆ. ಅಂದಹಾಗೆ, 5ನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಆಟಗಾರರಿಗೆ ಹಾಕಿ ಇಂಡಿಯಾ ತಲಾ 3 ಲಕ್ಷ ರೂ. ಬಹುಮಾನ ಘೋಷಿಸಿದೆ.