

ಕೋಲ್ಕತ: ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಲು, ಬಹುತೇಕ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಕಠಿಣ ಸವಾಲು ಎದುರಿಸುತ್ತಿರುವ ಪಾಕಿಸ್ತಾನ ತಂಡ ತನ್ನ 9ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಶನಿವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಂಗ್ಲರು 2019ರಲ್ಲಿ ಗೆದ್ದ ವಿಶ್ವ ಕಿರೀಟವನ್ನು ಈ ಬಾರಿ ಕಳೆದುಕೊಳ್ಳುವುದು ಈಗಾಗಲೆ ಖಚಿತಗೊಂಡಿರುವ ನಡುವೆ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸುವ ತವಕದಲ್ಲಿದ್ದಾರೆ.
ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಗೆಲುವು, 4 ಸೋಲಿನ ಸಹಿತ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ, ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಬೇಕಾದರೆ ಬರೀ ಗೆದ್ದರಷ್ಟೇ ಸಾಕಾಗದು. ರನ್ರೇಟ್ನಲ್ಲೂ ನ್ಯೂಜಿಲೆಂಡ್ ತಂಡವನ್ನು ಮೀರಿಸುವುದು ಅಗತ್ಯವಾಗಿದೆ. ಆದರೆ ಇದಕ್ಕಾಗಿ ಪಾಕ್, ಮೊದಲು ಬ್ಯಾಟಿಂಗ್ಗೆ ಇಳಿದಾಗ ಕನಿಷ್ಠ 287 ರನ್ಗಳಿಂದ ಪಂದ್ಯ ಗೆಲ್ಲಬೇಕಾಗಿದೆ. ಒಂದು ವೇಳೆ ಪಾಕ್ ಚೇಸಿಂಗ್ ಮಾಡುವುದಾದರೆ, 284 ಎಸೆತ ಉಳಿದಿರುವಂತೆಯೇ ಗುರಿ ತಲುಪಬೇಕಾಗುತ್ತದೆ. ಅಂದರೆ, ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ಗೆ ಇಳಿದರೆ ಪಾಕಿಸ್ತಾನ ಪಂದ್ಯದ ಮೊದಲ ಎಸೆತಕ್ಕೆ ಮುನ್ನವೇ ಸೆಮೀಸ್ ರೇಸ್ನಿಂದ ಹೊರಬೀಳುತ್ತದೆ.
ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಎಡವಿದ ಬಳಿಕ ಸತತ 4 ಪಂದ್ಯಗಳಲ್ಲಿ ಸೋತಿದ್ದ ಪಾಕ್, ಕಳೆದೆರಡು ಪಂದ್ಯಗಳಲ್ಲಿ ಬಾಂಗ್ಲಾ, ಕಿವೀಸ್ ಎದುರು ಗೆದ್ದು ಕೊನೇ ಪಂದ್ಯದವರೆಗೂ ಸವಾಲು ಜೀವಂತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಗದದ ಮೇಲಿನ ಸೆಮೀಸ್ ಲೆಕ್ಕಾಚಾರಗಳನ್ನು ಮೈದಾನದಲ್ಲಿ ನಿಜವಾಗಿಸುವುದು ಬಹುತೇಕ ಅಸಾಧ್ಯವೆನಿಸಿದೆ.
ಪವಾಡದ ನಿರೀಕ್ಷೆಯಲ್ಲಿ ಬಾಬರ್
ಸೆಮಿಫೈನಲ್ಗೇರಲು ಭಾರಿ ಗೆಲುವಿನ ಅಗತ್ಯವಿರುವ ನಡುವೆ ಪಾಕ್ ನಾಯಕ ಬಾಬರ್ ಅಜಮ್ ಆಸೆಯನ್ನು ಕೈಚೆಲ್ಲಿಲ್ಲ. ರನ್ರೇಟ್ ಸುಧಾರಣೆಗಾಗಿ ವಿಶೇಷ ಯೋಜನೆಯನ್ನೂ ರೂಪಿಸಿದ್ದಾರೆ. ಕಿವೀಸ್ ವಿರುದ್ಧದ ಬೆಂಗಳೂರಿನ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಎಡಗೈ ಆರಂಭಿಕ ಫಖರ್ ಜಮಾನ್, ಇಂಗ್ಲೆಂಡ್ ವಿರುದ್ಧವೂ 30ನೇ ಓವರ್ ತನಕ ಕ್ರೀಸ್ನಲ್ಲಿ ನಿಂತು ಆರ್ಭಟಿಸಿದರೆ ರನ್ರೇಟ್ ಸುಧಾರಣೆಗೆ ಅವಕಾಶಗಳಿವೆ ಎಂದು ಬಾಬರ್ ಹೇಳಿದ್ದಾರೆ.
ಆಂಗ್ಲರಿಗೆ ಚಾಂಪಿಯನ್ಸ್ ಟ್ರೋಫಿ ಅವಕಾಶ
ಸತತ 2ನೇ ಬಾರಿ ವಿಶ್ವಕಪ್ ಗೆಲ್ಲುವ ಆಸೆ ಕೈಚೆಲ್ಲಿರುವ ಆಂಗ್ಲರು ಈಗ ಚಾಂಪಿಯನ್ಸ್ ಟ್ರೋಫಿ ಅರ್ಹತೆಯತ್ತ ದೃಷ್ಟಿ ನೆಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ನೆದರ್ಲೆಂಡ್ ಎದುರು ಭರ್ಜರಿ ಗೆಲುವು ದಾಖಲಿಸಿರುವುದರಿಂದ ಇಂಗ್ಲೆಂಡ್, ರನ್ರೇಟ್ನಲ್ಲಿ ಭಾರಿ ಸುಧಾರಣೆ ಕಂಡಿದ್ದು, ಅಂಕಪಟ್ಟಿಯಲ್ಲೂ ಕೊನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. ಹೀಗಾಗಿ ಪಾಕ್ ವಿರುದ್ಧವೂ ಗೆದ್ದರೆ ಅಗ್ರ-8ರೊಳಗಿನ ಸ್ಥಾನದಿಂದ ಇಂಗ್ಲೆಂಡ್ಗೆ ಚಾಂಪಿಯನ್ಸ್ ಟ್ರೋಫಿ ಅರ್ಹತೆಯೂ ಒಲಿಯಲಿದೆ. ಜತೆಗೆ ಟೂರ್ನಿಗೆ ಗೌರವಯುತ ವಿದಾಯವನ್ನೂ ಹೇಳುವುದು ಆಂಗ್ಲರ ಹಂಬಲವಾಗಿದೆ.
ಏಕದಿನ ಮುಖಾಮುಖಿ: 91
ಇಂಗ್ಲೆಂಡ್: 56, ಪಾಕಿಸ್ತಾನ: 32, ರದ್ದು: 3
ವಿಶ್ವಕಪ್ ಮುಖಾಮುಖಿ: 10
ಇಂಗ್ಲೆಂಡ್: 4, ಪಾಕಿಸ್ತಾನ: 5, ರದ್ದು: 1
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸೆಮೀಸ್ಗೇರಲು ವಾಸಿಂ ಅಕ್ರಂ ವಿಚಿತ್ರ ಟಿಪ್ಸ್!
ಸೆಮೀಸ್ಗೇರಲು ಪಾಕ್ ತಂಡದೆದುರು ಬಹುತೇಕ ಅಸಾಧ್ಯವಾದ ಸವಾಲು ಇರುವ ನಡುವೆ ಮಾಜಿ ನಾಯಕ ಹಾಗೂ ವೇಗಿ ವಾಸಿಂ ಅಕ್ರಂ ವಿಚಿತ್ರವಾದ ಸಲಹೆಯೊಂದನ್ನು ನೀಡಿದ್ದಾರೆ. "ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಬೇಕು. ಬಳಿಕ ಇಂಗ್ಲೆಂಡ್ ತಂಡವನ್ನು ಡ್ರೆಸ್ಸಿಂಗ್ ರೂಂನಲ್ಲಿ ಲಾಕ್ ಮಾಡಿ, ಇಡೀ ತಂಡವನ್ನು ಟೈಮ್ಡ್ ಔಟ್ ಮೂಲಕ ಆಲೌಟ್ ಮಾಡಬೇಕು' ಎಂದು ಅಕ್ರಂ ತಮಾಷೆಯಾಗಿ ಹೇಳಿದ್ದಾರೆ.
ಸೆಮೀಸ್ಗೇರಲು ಪಾಕ್ ಲೆಕ್ಕಾಚಾರ
ಮೊದಲು ಬ್ಯಾಟಿಂಗ್ ಮಾಡಿದಾಗ
ಗಳಿಸಬೇಕಾದ ಮೊತ್ತ ಇಂಗ್ಲೆಂಡ್ ಆಲೌಟ್
300 13
350 63
400 112
450 162
500 211
ಚೇಸಿಂಗ್ ಮಾಡುವುದಾದರೆ
ಇಂಗ್ಲೆಂಡ್ ಮೊತ್ತ ಚೇಸಿಂಗ್ ಓವರ್
20 1.3
50 2
100 2.5
150 3.4
200 4.3
300 6.1