

ಬೆಂಗಳೂರು: ಇಂಗ್ಲೆಂಡ್ನ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಮಂಗಳವಾರವಷ್ಟೇ 600 ವಿಕೆಟ್ ಪಡೆಯುವ ಮೂಲಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದರು. ಈ ಸಾಧನೆ ಮಾಡಿದ ಮೊದಲ ವೇಗಿ ಹಾಗೂ ವಿಶ್ವದ 4ನೇ ಬೌಲರ್ ಎನಿಸಿದ್ದರು. ಆಂಡರ್ಸನ್ ಸಾಧನೆಗೆ ವಿಶ್ವ ಕ್ರಿಕೆಟ್ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್, ಆಂಡರ್ಸನ್ ಅವರನ್ನು ಅಭಿನಂದಿಸುವ ಬರದಲ್ಲಿ ಮಧ್ಯಮ ವೇಗಿ ಎಂದು ಟ್ವೀಟ್ ಮಾಡುವ ಮೂಲಕ ಭಾರೀ ಟ್ರೋಲ್ಗೆ ಸಿಲುಕಿದ್ದಾರೆ.
ಆಂಡರ್ಸನ್ಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿರುವ ಶೋಯಿಬ್ ಅಖ್ತರ್, ಇಂಗ್ಲೆಂಡ್ ದಿಗ್ಗಜ ಮಧ್ಯಮ ವೇಗಿ ನಿಮ್ಮ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು. ಮಧ್ಯಮ ವೇಗಿಯೊಬ್ಬರು 156 ಟೆಸ್ಟ್ ಪಂದ್ಯಗಳಲ್ಲಿ 600 ವಿಕೆಟ್ ಕಬಳಿಸಿರುವುದು ಸಾಧನೆಯೇ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಹಲವು ಮಂದಿ ವಿವಿಧ ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ಅಖ್ತರ್ ಕಾಲೆಳೆದಿದ್ದಾರೆ. ಮೀಡಿಯಂ ಫೇಸ್ ಆದರೂ ನಿಮಗಿಂತ ಉತ್ತಮ ಎಂದರೆ, ಮತ್ತೊಬ್ಬರು ಅವರು ಸ್ಪಿನ್ನರ್ ಇರಬೇಕು ಗಮನಿಸಿ ಎಂದಿದ್ದಾರೆ.
ಇಂಗ್ಲೆಂಡ್ನ ಸೌಥಾಂಪ್ಟನ್ನಲ್ಲಿ ಮಂಗಳವಾರ ಅಂತ್ಯಗೊಂಡ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಪಾಕಿಸ್ತಾನದ ನಾಯಕ ಅಜರ್ ಅಲಿ ವಿಕೆಟ್ ಕಬಳಿಸುವ ಮೂಲಕ 38 ವರ್ಷದ ಆಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪೂರೈಸಿದರು. ವಿಶ್ವ ಕ್ರಿಕೆಟ್ನಲ್ಲಿ 600 ವಿಕೆಟ್ ಕಬಳಿಸಿದ ವಿಶ್ವದ 4ನೇ ಬೌಲರ್ ಆಂಡರ್ಸನ್. ಇದಕ್ಕೂ ಮೊದಲು ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ (619), ಆಸ್ಟ್ರೆಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನರ್ (708) ಹಾಗೂ ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ (800) ಈ ಸಾಧನೆ ಮಾಡಿದ್ದರು.