

ದುಬೈ: ಸಂಟಿತ ಬೌಲಿಂಗ್ ನಿರ್ವಹಣೆ ತೋರಿದ ನ್ಯೂಜಿಲೆಂಡ್ ತಂಡ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು 54 ರನ್ಗಳಿಂದ ಮಣಿಸುವ ಮೂಲಕ 8 ವರ್ಷಗಳ ಬಳಿಕ ಉಪಾಂತ್ಯಕ್ಕೇರಿದೆ. ಇದರೊಂದಿಗೆ ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದೆ. ಪಾಕಿಸ್ತಾನ ಗೆದ್ದರಷ್ಟೇ ಭಾರತಕ್ಕೆ ಸೆಮಿಫೈನಲ್ಗೇರುವ ಅವಕಾಶವಿತ್ತು.
ದುಬೈ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಿವೀಸ್, 6 ವಿಕೆಟ್ಗೆ 110 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತೀಯರ ಮನದಲ್ಲಿ ಆಶಾಕಿರಣ ಮೂಡಿದರೂ, ಪಾಕಿಸ್ತಾನ ದಯನೀಯ ಬ್ಯಾಟಿಂಗ್ ನಿರ್ವಹಣೆ ತೋರಿ ಅದನ್ನು ಭಗ್ನಗೊಳಿಸಿತು. 11.4 ಓವರ್ಗಳಲ್ಲೇ ಕೇವಲ 56 ರನ್ಗಳಿಗೆ ಪಾಕ್ ಸರ್ವಪತನ ಕಂಡಿತು.
ನ್ಯೂಜಿಲೆಂಡ್ ತಂಡ 8 ವರ್ಷಗಳ ಬಳಿಕ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರಿತು. 2016ರಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿತ್ತು. ಭಾರತ ತಂಡ ಮಹಿಳಾ ಟಿ20 ವಿಶ್ವಕಪ್ನ 9 ಆವೃತ್ತಿಗಳ ಪೈಕಿ 4ನೇ ಬಾರಿ ಸೆಮಿಫೈನಲ್ಗೇರಲು ವಿಫಲವಾಯಿತು. ಈ ಮುನ್ನ 2012, 2014, 2016ರಲ್ಲೂ ಲೀಗ್ನಲ್ಲೇ ಹೊರಬಿದ್ದಿತ್ತು.
ನ್ಯೂಜಿಲೆಂಡ್: 6 ವಿಕೆಟ್ಗೆ 110 (ಬೇಟ್ಸ್ 28, ಪ್ಲಿಮ್ಮರ್ 17, ಅಮೆಲಿಯಾ ಕೆರ್ 9, ಡಿವೈನ್ 19, ಹಾಲಿಡೇ 22, ಮ್ಯಾಡಿ ಗ್ರೀನ್ 9, ನಶ್ರಾ ಸಂಧು 18ಕ್ಕೆ 3, ನಿದಾ 26ಕ್ಕೆ 1, ಸಾದಿಯಾ 23ಕ್ಕೆ 1), ಪಾಕಿಸ್ತಾನ: 11.4 ಓವರ್ಗಳಲ್ಲಿ 56 (ಮುನೀಬಾ ಅಲಿ 15, ಇರಾಮ್ 3, ಫಾತಿಮಾ ಸನಾ 21, ನಿದಾ 9, ತಹುಹು 8ಕ್ಕೆ 1, ಅಮೆಲಿಯಾ ಕೆರ್ 14ಕ್ಕೆ 3, ಕರ್ಸನ್ 7ಕ್ಕೆ 1).
ಬಿ ಗುಂಪಿನಲ್ಲೂ ಕುತೂಹಲ
ಸೆಮಿಫೈನಲ್ಗೇರಲು ಬಿ ಗುಂಪಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂಗ್ಲೆಂಡ್ ಆಡಿದ 3 ಪಂದ್ಯದಲ್ಲೂ ಗೆದ್ದು ಅಗ್ರಸ್ಥಾನದಲ್ಲಿದ್ದರೆ, ದ. ಆಫ್ರಿಕಾ 4ರಲ್ಲಿ 3 ಗೆದ್ದು 2ನೇ ಸ್ಥಾನದಲ್ಲಿದೆ. ವಿಂಡೀಸ್ 3ರಲ್ಲಿ 2 ಗೆದ್ದು 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್-ವಿಂಡೀಸ್ ನಡುವೆ ಮಂಗಳವಾರ ಅಂತಿಮ ಲೀಗ್ ಪಂದ್ಯ ನಡೆಯಲಿದ್ದು, ಆಂಗ್ಲರು ಗೆದ್ದರೆ ಆಫ್ರಿಕಾವನ್ನೂ ಉಪಾಂತ್ಯಕ್ಕೇರಿಸಲಿದ್ದಾರೆ. ವಿಂಡೀಸ್ ಗೆದ್ದರೆ ಮೂರೂ ತಂಡಗಳು ತಲಾ 6 ಅಂಕ ಗಳಿಸಲಿದ್ದು, ಉತ್ತಮ ರನ್ರೇಟ್ ಹೊಂದಿರುವ 2 ತಂಡಗಳು ಉಪಾಂತ್ಯಕ್ಕೇರಲಿವೆ.