Border–Gavaskar Trophy: ಆಸ್ಟ್ರೆಲಿಯಾದಲ್ಲಿ ಒಂದು ಟೆಸ್ಟ್​ಗೆ ರೋಹಿತ್​ ಶರ್ಮ ಗೈರು; ಹೀಗಿದೆ ಕಾರಣ…

web rohit
Published on

ನವದೆಹಲಿ: ಭಾರತ ತಂಡದ ನಾಯಕ ರೋಹಿತ್​ ಶರ್ಮ ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಆರಂಭಿಕ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಒಂದು ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್​ ಈಗಾಗಲೆ ಬಿಸಿಸಿಐ ಜತೆಗೆ ಸಂವಹನ ನಡೆಸಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ.

ರೋಹಿತ್​ ಪತ್ನಿ ರಿತಿಕಾ ಆ ಸಮಯದಲ್ಲಿ ಎರಡನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇರುವುದರಿಂದ ತವರಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಸೀಸ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿ ನವೆಂಬರ್​ 22ರಂದು ಶುರುವಾಗಲಿದ್ದು, ಮೊದಲ ಪಂದ್ಯ ಪರ್ತ್​ನಲ್ಲಿ ನಡೆಯಲಿದೆ. 2ನೇ ಟೆಸ್ಟ್​ ಡಿಸೆಂಬರ್​ 6ರಿಂದ 10ರವರೆಗೆ ಅಡಿಲೇಡ್​ನಲ್ಲಿ ನಿಗದಿಯಾಗಿದೆ.

37 ವರ್ಷದ ರೋಹಿತ್​ ಶರ್ಮ ಅವರ ಪತ್ನಿ ರಿತಿಕಾ ಒಂದು ವೇಳೆ ಆಸ್ಟ್ರೆಲಿಯಾ ಪ್ರವಾಸಕ್ಕೆ ಮೊದಲೇ ಮಗುವಿಗೆ ಜನ್ಮ ನೀಡಿದರೆ ಎಲ್ಲ 5 ಟೆಸ್ಟ್​ ಪಂದ್ಯಗಳಲ್ಲೂ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆಸ್ಟ್ರೆಲಿಯಾ ಪ್ರವಾಸಕ್ಕೆ ಮುನ್ನ ಭಾರತ ತಂಡ ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ನವೆಂಬರ್​ 5ರವರೆಗೆ ಟೆಸ್ಟ್​ ಸರಣಿ ಆಡಲಿದೆ.

ಆಸ್ಟ್ರೆಲಿಯಾದಲ್ಲಿ ರೋಹಿತ್​ ಶರ್ಮ ಟೆಸ್ಟ್​ ಪಂದ್ಯ ತಪ್ಪಿಸಿಕೊಂಡರೆ ಅವರ ಬದಲಿಗೆ ಅಭಿಮನ್ಯು ಈಶ್ವರನ್​ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಶುಭಮಾನ್​ ಗಿಲ್​ ಅಥವಾ ಕೆಎಲ್​ ರಾಹುಲ್​ ಕೂಡ ಬದಲಿ ಆರಂಭಿಕರಾಗುವ ರೇಸ್​ನಲ್ಲಿದ್ದಾರೆ ಎನ್ನಲಾಗಿದೆ.

ಭಾರತ ತಂಡ ಇತ್ತೀಚೆಗೆ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಉಪನಾಯಕನನ್ನು ಹೆಸರಿಸಿರಲಿಲ್ಲ. ಹೀಗಾಗಿ ರೋಹಿತ್​ ಗೈರಾದಾಗ ಟೆಸ್ಟ್​ ತಂಡದ ಹಂಗಾಮಿ ನಾಯಕತ್ವ ಯಾರ ಪಾಲಾಗಲಿದೆ ಎಂಬ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ. ಸದ್ಯಕ್ಕೆ ಈ ನಿಟ್ಟಿನಲ್ಲಿ ಸೀಮಿತ ಓವರ್​ ತಂಡದ ಉಪನಾಯಕ ಶುಭಮಾನ್​ ಗಿಲ್​, ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ವಿಕೆಟ್​ ಕೀಪರ್​ ರಿಷಭ್​ ಪಂತ್​ ರೇಸ್​ನಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net