

ನವದೆಹಲಿ: ಈ ಬಾರಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡು ವಿಶ್ವಕಪ್ ಪ್ರವಾಸ ಆರಂಭಿಸಿದ ಪಾಕಿಸ್ತಾನ, ಲೀಗ್ ಹಂತದಲ್ಲೇ ಹೊರಬಿದ್ದಿತು. ಸಾಂಪ್ರದಾಯಿಕ ಎದುರಾಳಿ ಭಾರತಕ್ಕೆ ಪಾಕ್ ಸವಾಲಾಗಲೇ ಇಲ್ಲ. ಸಾಲು ಸಾಲು ಸೋಲುಗಳೊಂದಿಗೆ ಸಾಕಷ್ಟು ಟೀಕೆಗಳಿಗೆ ಗುರಿಯಾದ ಪಾಕ್, ಪ್ರಸ್ತುತ ಕ್ರಿಕೆಟ್ ಫಾರ್ಮ್ನಲ್ಲಿ ಹೀನಾಯ ಹಂತದಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯಂತ ಕಳಪೆ ನಿರ್ವಹಣೆ ತೋರಿತು.
ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಿದ ಪಾಕ್, ಪಂದ್ಯದ ಫಲಿತಾಂಶಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದಿತ್ತು. ಅಲ್ಲದೆ, ಪಂದ್ಯವನ್ನು ಹೀನಾಯವಾಗಿ ಸೋತಿತು. ಈ ಮೂಲಕ ವಿಶ್ವಕಪ್ಗೆ ಸೋಲಿನ ವಿದಾಯ ಹೇಳಿತು. ಈ ಪಂದ್ಯದಲ್ಲಿ ಪಾಕ್ ಬೌಲರ್ಗಳು ಇಂಗ್ಲೆಂಡ್ ಬ್ಯಾಟರ್ಗಳಿಗೆ ಸುಲಭ ತುತ್ತಾದರು. ಅದರಲ್ಲೂ ಪಾಕ್ ಭರವಸೆಯ ಬೌಲರ್ ಹ್ಯಾರಿಸ್ ರೌಫ್ ಭರವಸೆ ಉಳಿಸಿಕೊಳ್ಳಲಿಲ್ಲ. ಬದಲಾಗಿ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನಿನ್ನೆ 10 ಓವರ್ ಎಸೆದ ರೌಫ್, 3 ವಿಕೆಟ್ ಪಡೆದರೂ ಕೂಡ 64 ರನ್ ನೀಡಿದರು.
ವಿಶ್ವಕಪ್ನಲ್ಲಿ 9 ಲೀಗ್ ಪಂದ್ಯಗಳನ್ನು ಆಡಿರುವ ರೌಫ್, 16 ವಿಕೆಟ್ಗಳನ್ನು ಪಡೆದು, ಒಟ್ಟು 553 ರನ್ಗಳನ್ನು ಬಿಟ್ಟುಕೊಟ್ಟರು. ಇದರು 48 ವರ್ಷದ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಆಗಿದ್ದು, ಅತ್ಯಂತ ಕಳಪೆ ದಾಖಲೆಯಾಗಿದೆ. 2019ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ನ ಆದಿಲ್ ರಶೀದ್ ಅವರು 11 ಪಂದ್ಯಗಳಿಂದ 526 ರನ್ ನೀಡಿದ್ದರು.
ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ದಿಲ್ಶನ್ ಮಧುಶಂಕ (525), ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (502) ಮತ್ತು ಬಾಂಗ್ಲಾದೇಶದ ಮುಸ್ತಾಫಿಜರ್ ರೆಹಮಾನ್ (484) ಐದನೇ ಸ್ಥಾನದಲ್ಲಿದ್ದಾರೆ. ಇವರೆಲ್ಲರು 2019ರ ವಿಶ್ವಕಪ್ನಲ್ಲಿ ಕಳಪೆ ನಿರ್ವಹಣೆ ತೋರಿದರು. ಪ್ರಸಕ್ತ ಟೂರ್ನಿಯಲ್ಲಿ ಪಾಕ್ನ ಮತ್ತೊಬ್ಬ ಬೌಲರ್ ಶಾಹೀನ್ ಅಫ್ರಿದಿ ಸಹ ಆರನೇ ಕಳಪೆ ಬೌಲರ್ ಎನಿಸಿಕೊಂಡಿದ್ದಾರೆ.
ನಿನ್ನೆ (ನ.11) ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 44ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 93 ರನ್ಗಳ ಅಂತರದಿಂದ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವಕಪ್ ಅಭಿಯಾನವನ್ನು ಮುಗಿಸಿತು. ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ 43.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 244 ರನ್ ಕಲೆಹಾಕುವ ಮೂಲಕ ಆಂಗ್ಲರ ಮುಂದೆ 93 ರನ್ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು. ನ್ಯೂಜಿಲೆಂಡ್ ತಂಡದ ರನ್ರೇಟ್ ಹಿಂದಿಕ್ಕಿ ಸಮಿಫೈನಲ್ಗೇರಲು ಆಂಗ್ಲ ಪಡೆ ನೀಡಿದ ಗುರಿಯನ್ನು ಕೇವಲ 6.4 ಓವರ್ಗಳಲ್ಲಿ ಪಾಕಿಸ್ತಾನ ಮುಟ್ಟಬೇಕಿತ್ತು. ಆದರೆ, ಅದು ಬಾಬರ್ ಅಜಾಮ್ ಪಡೆಯಿಂದ ಸಾಧ್ಯವಾಗಲಿಲ್ಲ. 6.4 ಓವರ್ಗಳಲ್ಲಿ 337 ರನ್ ಗಳಿಸಲು ಪ್ರತಿ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ರೂ ಸಾಧ್ಯವಾಗುತ್ತಿರಲಿಲ್ಲ.
ಸೆಮೀಸ್ನಲ್ಲಿ ಮುಖಾಮುಖಿಯಾಗುವ ತಂಡಗಳು
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಮೀಸ್ ಪ್ರವೇಶ ಪಡೆದಿದ್ದು, ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ನ.19ಕ್ಕೆ ವಿಶ್ವಕಪ್ ಹಬ್ಬಕ್ಕೆ ವಿದ್ಯುಕ್ತ ತೆರೆ
ಎರಡೂ ಸಮಿಫೈನಲ್ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)