More

    ಹೀನಾಯ ಸೋಲಿನೊಂದಿಗೆ ವಿಶ್ವಕಪ್​ನಿಂದ ಹೊರಬಿದ್ದ ಪಾಕ್​: ಗೆಲುವಿನೊಂದಿಗೆ ಆಂಗ್ಲರ ಪ್ರವಾಸ ಅಂತ್ಯ

    ಕೋಲ್ಕತ: ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ಇಂದು (ನ.11) ನಡೆದ ವಿಶ್ವಕಪ್​ ಟೂರ್ನಿಯ 44ನೇ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 93 ರನ್​ಗಳ ಅಂತರದಿಂದ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವಕಪ್​ ಅಭಿಯಾನವನ್ನು ಮುಗಿಸಿದೆ. ಇನ್ನೊಂದೆಡೆ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್​ ಕೂಡ ವಿಶ್ವಕಪ್​ನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಿ, ತವರಿನತ್ತ ಹೊರಡಲು ರೆಡಿಯಾಗಿದೆ.

    ಇಂದು ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್ ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 337 ರನ್​ಗಳ ಬೃಹತ್​ ಮೊತ್ತವನ್ನು ಪೇರಿಸಿತು. ಇಂಗ್ಲೆಂಡ್​ ಪರ ಬೆನ್​ ಸ್ಟೋಕ್ಸ್​ (84), ಜೋ ರೂಟ್​ (60) ಮತ್ತು ಜಾನಿ ಬೈರ್​ಸ್ಟೋ (59) ಅಮೋಘ ಆಟವಾಡುವ ಮೂಲಕ ತಂಡವು ಬೃಹತ್​ ಮೊತ್ತ ಕಲೆಹಾಕಲು ನೆರವಾದರು.

    ಪಾಕಿಸ್ತಾನ ಪರ ಹ್ಯಾರೀಸ್​ ರೌಫ್​ 3 ವಿಕೆಟ್​ ಕಬಳಿಸಿದರೆ, ಶಾಹೀನ್​ ಅಫ್ರಿದಿ ಮತ್ತು ಮೊಹಮ್ಮದ್​ ವಾಸಿಂ ತಲಾ 2 ವಿಕೆಟ್​ ಪಡೆದರು. ಉಳಿದಂತೆ ಇಫ್ತಿಕರ್​ ಅಹ್ಮದ್​ 1 ವಿಕೆಟ್​ ಉರುಳಿಸಿದರು.

    ಇಂಗ್ಲೆಂಡ್​ ನೀಡಿದ ಬೃಹತ್​ ಮೊತ್ತದ ಗುರಿ ಬೆನ್ನತ್ತಿದ ಪಾಕಿಸ್ತಾನ 43.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 244 ರನ್​ ಕಲೆಹಾಕುವ ಮೂಲಕ ಆಂಗ್ಲರ ಮುಂದೆ 93 ರನ್​ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು. ಪಾಕ್​ ಪರ ಅಘಾ ಸಲ್ಮಾನ್​ (51), ಬಾಬರ್​ ಅಜಾಮ್​ (38) ಮತ್ತು ಮೊಹಮ್ಮದ್​ ರಿಜ್ವಾನ್​ (36) ರನ್​ ಗಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಯಾರೊಬ್ಬರು ಕೂಡ ಅಬ್ಬರದ ಬ್ಯಾಟಿಂಗ್​ ಮೂಲಕ ಮಿಂಚಲಿಲ್ಲ.

    ಇಂಗ್ಲೆಂಡ್​ ಪರ ಡೇವಿಟ್​ ವಿಲ್ಲಿ ಮೂರು ವಿಕೆಟ್​ ಪಡೆದರೆ, ಆದಿಲ್​ ರಶೀದ್​, ಗಸ್​ ಅಟ್ಕಿನ್ಸನ್​ ಮತ್ತು ಮೋಯಿನ್​ ಆಲಿ ತಲಾ ಎರಡು ವಿಕೆಟ್​ ಪಡೆದರು. ಕ್ರಿಸ್​ ವೋಕ್ಸ್​ ಒಂದು ವಿಕೆಟ್​ಗೆ ತೃಪ್ತಿಪಟ್ಟುಕೊಂಡರು.

    ನಡೆಯಲಿಲ್ಲ ಪವಾಡ
    ನ್ಯೂಜಿಲೆಂಡ್​ ತಂಡದ ರನ್​ರೇಟ್​ ಹಿಂದಿಕ್ಕಿ ಸಮಿಫೈನಲ್​ಗೇರಲು ಆಂಗ್ಲ ಪಡೆ ನೀಡಿದ ಗುರಿಯನ್ನು ಕೇವಲ 6.4 ಓವರ್​ಗಳಲ್ಲಿ ಪಾಕಿಸ್ತಾನ ಮುಟ್ಟಬೇಕಿತ್ತು. ಆದರೆ, ಅದು ಬಾಬರ್​ ಅಜಾಮ್​ ಪಡೆಯಿಂದ ಸಾಧ್ಯವಾಗಲಿಲ್ಲ. 6.4 ಓವರ್​ಗಳಲ್ಲಿ 337 ರನ್​ ಗಳಿಸಲು ಪ್ರತಿ ಎಸೆತಗಳಲ್ಲಿ ಸಿಕ್ಸರ್​ ಬಾರಿಸಿದ್ರೂ ಸಾಧ್ಯವಾಗುತ್ತಿರಲಿಲ್ಲ. ಶುಕ್ರವಾರ (ನ.10) ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬರ್​ ಅಜಾಮ್​, ಒಂದು ವೇಳೆ ಫಖರ್​ ಜಮಾನ್​ ಅವರು 20 ರಿಂದ 30 ಓವರ್​ ಕ್ರೀಸ್​ನಲ್ಲಿದ್ದರೆ ನಾವು ದೊಡ್ಡ ಸ್ಕೋರ್​ ಮಾಡುತ್ತೇವೆ ಎಂದಿದ್ದರು. ಕ್ರಿಕೆಟ್‌ನಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು, ನಾವು ಪಂದ್ಯಾವಳಿಯನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಪ್ರಯತ್ನಿಸುತ್ತೇವೆ. ಇಫ್ತಿಕರ್ ಅಹ್ಮದ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಪಾತ್ರವೂ ತುಂಬಾ ಪ್ರಮುಖವಾಗಿರುತ್ತದೆ ಎಂದು ಅಜಮ್ ಆತ್ಮವಿಶ್ವಾಸದಿಂದ ಹೇಳಿದ್ದರು. ಆದರೆ, ಅವರ ಎಲ್ಲಾ ಲೆಕ್ಕಾಚಾರವನ್ನು ಇಂಗ್ಲೆಂಡ್​ ತಂಡ ತಲೆಕೆಳಗೆ ಮಾಡಿದೆ.

    ಸಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    2019ರ ಸೋಲಿನ ಮುಖಭಂಗ! ಕಿವೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸುವರ್ಣಾವಕಾಶ

    ಠುಸ್ಸಾದ ಬಾಬರ್​ ಅಜಾಮ್​ ಪ್ಲ್ಯಾನ್​: ವಿಶ್ವಕಪ್​ನಿಂದ ಪಾಕ್​ ಔಟ್​, ಸೆಮೀಸ್​ನಲ್ಲಿ ಭಾರತಕ್ಕೆ ಕಿವೀಸ್​ ಸವಾಲು

    ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts