ವಿರಾಟ್ ಕೊಹ್ಲಿಗೆ ಮರುಜನ್ಮ ನೀಡಿದ ಸೂಪರ್ ಮ್ಯಾನ್ ಇವರೆ ನೋಡಿ..!

Virat Kohli
Published on

ನವದೆಹಲಿ: ವಿರಾಟ್​ ಕೊಹ್ಲಿ ಈ ಹೆಸರೇ ಸಾಕು ಎದುರಾಳಿ ತಂಡದ ಆಟಗಾರರು ಭಯಪಡಲು. ಕಿಂಗ್​ ಕೊಹ್ಲಿ, ಚೇಸಿಂಗ್​ ಮಾಸ್ಟರ್​, ದಾಖಲೆಗಳ ಸರದಾರ ಎಂಬೆಲ್ಲ ಬಿರುದಾಂಕಿತ ಹೊಂದಿರುವ ಕೊಹ್ಲಿ ಕ್ರಿಕೆಟ್​ ಜಗತ್ತಿನ ಅಧಿಪತಿ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಸಕ್ತ ವಿಶ್ವಕಪ್​​ ಟೂರ್ನಿಯಲ್ಲಿ ತಮ್ಮ ಜನ್ಮ ದಿನದಂದೇ 49ನೇ ಶತಕ ಸಿಡಿಸಿದ ಕೊಹ್ಲಿ, ಕ್ರಿಕೆಟ್​ ದಿಗ್ಗಜ ಸಚಿನ್​ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಪೈಕಿ ಒಬ್ಬರಾಗಿರುವ ಕೊಹ್ಲಿ, ಪ್ರಸ್ತುತ ಯಶಸ್ಸಿನ ಪಥದಲ್ಲಿ ಮುನ್ನುಗ್ಗುತ್ತಿದ್ದಾರೆ. ಇಂತಹ ಕೊಹ್ಲಿ ಹಿಂದೊಮ್ಮೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಯಾರೇ ಆಗಲಿ ತಮ್ಮ ಜೀವನದಲ್ಲಿ ಏರಿಳಿತಗಳನ್ನು ಅನುಭವಿಸಲೇಬೇಕು. ಜೀವನ ಕಠಿಣ ಸಂದರ್ಭದಲ್ಲಿ ವ್ಯಕ್ತಿಯು ಮಾನಸಿಕ ಸಮಸ್ಯೆಗೆ ಸಿಲುಕುತ್ತಾನೆ. ಕೊಹ್ಲಿ ವೃತ್ತಿ ಜೀವನದಲ್ಲೂ ಸಹ ಇದು ನಡೆದಿದೆ. ಸ್ವತಃ ಕೊಹ್ಲಿ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮಾನಸಿಕ ಸಮಸ್ಯೆನ್ನು ಮೆಟ್ಟಿನಿಲ್ಲಲು ನೆರವಾದವರನ್ನು ಸ್ಮರಿಸಿದ್ದಾರೆ.

ಮಾನಸಿಕ ಸಮಸ್ಯೆಯಿಂದ ಬಳುತ್ತಿದ್ದ ಕೊಹ್ಲಿ, ಟೀಮ್​ ಇಂಡಿಯಾದ ಮಾಜಿ ಮೆಂಟಲ್ ಕಂಡಿಷನಿಂಗ್ ಕೋಚ್​ ಪ್ಯಾಡಿ ಅಪ್ಟನ್, ನೆರವಿನಿಂದ ಚೇತರಿಸಿಕೊಂಡು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮತ್ತೆ ಯಶಸ್ಸಿನ ಲಯಕ್ಕೆ ಮರಳಿದ್ದನ್ನು ಸ್ಟಾರ್​​ ಸ್ಪೋರ್ಟ್ಸ್​ ಮಾಧ್ಯಮ ಸಂದರ್ಶನದಲ್ಲಿ ಸ್ಮರಿಸಿದ್ದಾರೆ. ತಮ್ಮ ಜೀವನದಲ್ಲಿ ಪ್ಯಾಡಿ ಅಪ್ಟನ್ ಅವರ ಪಾತ್ರ ಮಹತ್ತರವಾದ್ದದ್ದು ಎಂದಿದ್ದಾರೆ. ಅಲ್ಲದೆ, ಅಪ್ಟನ್​ ಅವರು ನನ್ನ ವೃತ್ತಿಜೀವನದ ಹೋರಾಟಗಳನ್ನು ಕ್ರಿಕೆಟ್ ದೃಷ್ಟಿಕೋನದಿಂದ ಅರ್ಥಮಾಡಿಕೊಂಡರು. ಮಾಜಿ ಕ್ರಿಕೆಟಿಗರಾಗಿ ಕ್ರೀಡಾ ಮನಶಾಸ್ತ್ರಜ್ಞನಾಗಿ ಹೊರಹೊಮ್ಮಿದ ಅಪ್ಟನ್ ಅವರ ಅನನ್ಯ ಒಳನೋಟವನ್ನು ಕೊಹ್ಲಿ ಮೆಚ್ಚಿದ್ದಾರೆ.

2011ರ ವಿಶ್ವಕಪ್​ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಕೋಚ್​ ಆಗಿದ್ದ ಗ್ಯಾರಿ ಕಸ್ಟರ್ನ್​ ಅವರಿಗೆ ದಕ್ಷಿಣ ಆಫ್ರಿಕಾ ಮೂಲದ ಪ್ಯಾಡಿ ಅಪ್ಟನ್ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.​ ಕಳೆದ ವರ್ಷದ ಟಿ20 ವಿಶ್ವಕಪ್​ ಸಂದರ್ಭದಲ್ಲಿ ಅಲ್ಪಾವಧಿಗೆ ಅಪ್ಟನ್​ ಅವರನ್ನು ಬಿಸಿಸಿಐ ಮರಳಿ ಕರೆತಂದಿತ್ತು. ಈ ವೇಳೆ ಅಪ್ಟನ್​ ಅವರೊಂದಿಗೆ ಕೊಹ್ಲಿ ಅವರು ಆಗಾಗ ನಡೆಸಿದ ಮಾತುಕತೆಗಳು ಅವರಲ್ಲಿನ ಮಾನಸಿಕ ಸಮಸ್ಯೆಯನ್ನು ಸಂಪೂರ್ಣವಾಗಿ ತೊಲಗಿಸಿ, ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರೇರೇಪಿಸಿತು ಎಂದಿದ್ದಾರೆ. ವೈಫಲ್ಯಗಳಿಂದ ವೃತ್ತಿಜೀವನ ಕಠಿಣ ಸಮಯದಲ್ಲಿದ್ದ ಕೊಹ್ಲಿ, ಅಪ್ಟನ್​ ಅವರ ಸಲಹೆಯಿಂದಲೇ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು. ಪಾಕಿಸ್ತಾನ ವಿರುದ್ಧ ಕೇವಲ 52 ಎಸೆತಗಳಲ್ಲಿ 82 ರನ್​ ಗಳಿಸಿ ಪಂದ್ಯವನ್ನೇ ಭಾರತದ ಪರವಾಗಿ ತಿರುಗಿಸಿದರು. ಕೊಹ್ಲಿ ಕ್ರಿಕೆಟ್​ ಕೆರಿಯರ್​ನಲ್ಲಿ ಇದೊಂದು ಸ್ಮರಣೀಯ ಪಂದ್ಯವಾಗಿಯೇ ಉಳಿದಿದೆ. ಈ ವೇಳೆ ಕೊಹ್ಲಿ ಅವರಿಗೆ ಮೆಚ್ಚುಗೆ ಮಹಾಪೂರವೇ ಹರಿದುಬಂದಿತು.

ಅಪ್ಟನ್​ ಅವರು ನಿರಂತವಾಗಿ ನನ್ನ ಆಟವನ್ನು ಪರಿಶೀಲಿಸುತ್ತಿದ್ದರು ಮತ್ತು ಒಳ್ಳೆಯ ಕ್ರಿಕೆಟ್​ ಆಡಿದಾಗ ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸುವಂತೆ ತಿಳಿ ಹೇಳುತ್ತಿದ್ದರು. ಸುದೀರ್ಘ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳು ಇರುತ್ತವೆ ಎಂಬುದನ್ನು ಅಪ್ಟನ್​ ಅವರು ಕ್ರಿಕೆಟ್​ ದೃಷ್ಟಿಕೋನದಿಂದ ಅರಿತಿದ್ದರು. ಸ್ವತಃ ಕ್ರಿಕೆಟ್​ ಆಡಿದ್ದ ಅವರು ಕ್ರೀಡಾ ಮನಶಾಸ್ತ್ರಜ್ಞನಾಗುವುದು ವಿಭಿನ್ನ ರೀತಿಯ ಸ್ಥಾನವಾಗಿದೆ. ಏಕೆಂದರೆ, ನೀವು ಆಟವನ್ನೇ ಆಡದಿದ್ದರೆ, ಹೋರಾಟಗಳು ಮತ್ತು ಸವಾಲುಗಳನ್ನು ವಿವರಿಸುವುದು ತುಂಬಾ ಭಿನ್ನವಾಗಿರುತ್ತದೆ. ಆದರೆ, ಆಡಿದವರಿಗೆ ಆಟದ ಬಗ್ಗೆ ಪ್ರತಿ ಎಳೆಯು ತಿಳಿದಿರುತ್ತದೆ. ನಾನು ಅಪ್ಟನ್​ ಅವರೊಂದಿಗೆ ಸಾಕಷ್ಟು ಸಂಭಾಷಣೆಗಳನ್ನು ನಡೆಸಿದೆ ಮತ್ತು ನಾನು ಅವರನ್ನು ನಿಜವಾಗಿಯೇ ಪ್ರಶಂಸಿಸುತ್ತೇನೆ. ಏಕೆಂದರೆ, ಅವರು ನಿರಂತರವಾಗಿ ನನ್ನನ್ನು ಪರಿಶೀಲಿಸಿ, ಪ್ರತಿಯೊಂದು ಅಂಶಗಳನ್ನು ತಿಳಿಸುತ್ತಿದ್ದರು ಎಂದಿದ್ದಾರೆ.

ನೀವು ಉತ್ತಮ ಕ್ರಿಕೆಟ್ ಆಡುವಾಗ ನೀವು ಮಾಡಿದ ಕೆಲಸಗಳನ್ನು ಮುಂದುವರಿಸಿ. ಇಂದು ವಿಭಿನ್ನವಾಗಿದೆಯೇ ಅಥವಾ ಅದೇ ಅನುಭವ ಆಗಿದೆಯೇ? ಆಟದ ವೈಫಲ್ಯದ ನಂತರ ನಿಮಗೆ ಏನನಿಸಿತು? ನೀವು ವಿಷಯಗಳನ್ನು ನೋಡುವ ರೀತಿ ಬದಲಾಗುತ್ತಿದೆಯೇ? ಈ ರೀತಿ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು. ಈ ಕಾರಣಕ್ಕಾಗಿ ನಾನು ಅವರಿಗೆ ತುಂಬಾ ಧನ್ಯವಾದ ಹೇಳಿದ್ದೇನೆ. ಏಕೆಂದರೆ ಅವರು ನನಗೆ ಒಂದು ದೃಷ್ಟಿಕೋನವನ್ನು ನೀಡಿದರು. ಅಲ್ಲದೆ, ಮತ್ತೊಮ್ಮೆ ಉತ್ತೇಜನವನ್ನು ಸಹ ನೀಡಿದರು. ನಿಮಗೆ ತಿಳಿದಿದೆ, ನೀವು ಒತ್ತಡದಲ್ಲಿರುವಾಗ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಸ್ತುತ ಕ್ಷಣಕ್ಕೆ ಹಿಂತಿರುಗಿ ನೋಡಬೇಕು. ಅದನ್ನು ಅಪ್ಟನ್​ ಅವರು ಕಲಿಸಿಕೊಟ್ಟರು ಎಂದು ಕೊಹ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net