

ಲಾಹೋರ್: ಮಳೆ, ಭದ್ರತಾ ಭೀತಿ, ರಾಜತಾಂತ್ರಿಕ ಬಿಕ್ಕಟ್ಟು, ವಾಯು ಮಾಲಿನ್ಯ ಮುಂತಾದ ಕಾರಣಗಳಿಂದಾಗಿ ಕ್ರಿಕೆಟ್ ಪಂದ್ಯಗಳು ಸ್ಥಳಾಂತರಗೊಂಡಿರುವುದನ್ನು ಕೇಳಿರುತ್ತೀರಿ. ಆದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯವೊಂದು ಇದೆಲ್ಲಕಿಂತಲೂ ಮುಗಿಲಾದ ಕಾರಣಗಳಿಂದಾಗಿ ಸ್ಥಳಾಂತರಗೊಂಡಿರುವುದು ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದೆ.
ಕರಾಚಿಯಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಶಬ್ದ ಮಾಲಿನ್ಯದ ಭೀತಿಯಿಂದಾಗಿ ರಾವಲ್ಪಿಂಡಿಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ನಿರ್ಧರಿಸಿದೆ. ಸರಣಿಯ ಮೊದಲ ಪಂದ್ಯ ಈಗಾಗಲೆ ಆಗಸ್ಟ್ 21ರಿಂದ ರಾವಲ್ಪಿಂಡಿಯಲ್ಲೇ ನಿಗದಿಯಾಗಿದೆ.
ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ಕರಾಚಿ ಸ್ಟೇಡಿಯಂನಲ್ಲಿ ನವೀಕರಣ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಕಾಮಗಾರಿಯ ವೇಳೆ ಭಾರಿ ಗಾತ್ರದ ಪರಿಕರಗಳಿಂದ ದೊಡ್ಡ ಶಬ್ದಗಳು ಉಂಟಾಗುವ ಸಾಧ್ಯತೆಗಳಿವೆ. ಇದು ಟೆಸ್ಟ್ ಪಂದ್ಯದ ವೇಳೆ ಆಟಗಾರರಿಗೆ ಕಿರಿಕಿರಿ ತರಬಹುದು ಎಂಬ ಭೀತಿಯಿಂದ ಪಂದ್ಯ ಸ್ಥಳಾಂತರಿಸಲು ಪಿಸಿಬಿ ನಿರ್ಧರಿಸಿದೆ. 2025ರ ಫೆಬ್ರವರಿಯಲ್ಲೇ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸಿದ್ಧತೆಯಲ್ಲಿ ಪಾಕ್ ಈಗಾಗಲೆ ಸಾಕಷ್ಟು ಹಿಂದುಳಿದಿದೆ. ಹೀಗಾಗಿ ಕರಾಚಿಯಲ್ಲಿ ಟೆಸ್ಟ್ ಪಂದ್ಯದ ವೇಳೆ ಕಾಮಗಾರಿ ಕೆಲಸವನ್ನು ಸ್ಥಗಿತಗೊಳಿಸುವಷ್ಟು ಸಮಯಾವಕಾಶ ಪಿಸಿಬಿ ಬಳಿ ಇಲ್ಲ. ಹೀಗಾಗಿ ಟೆಸ್ಟ್ ಪಂದ್ಯಕ್ಕೆ ಶಬ್ದದಿಂದ ಕಿರಿಕಿರಿಯಾಗುವುದನ್ನು ತಪ್ಪಿಸಲು ಪಿಸಿಬಿ ಸ್ಥಳಾಂತರದ ನಿರ್ಧಾರ ತೆಗೆದುಕೊಂಡಿದೆ.