ಇದು ಒಪ್ಪಲು ಸಾಧ್ಯವೇ ಇಲ್ಲ! ಪಾಕ್ ಆಟಗಾರರಿಗೆ ಖಡಕ್​ ವಾರ್ನಿಂಗ್ ಕೊಟ್ಟ ಹೆಡ್​ ಕೋಚ್

ವಿಜಯವಾಣಿ (53)
Published on

ರಾವಲ್​ಪಿಂಡಿ: ಇತ್ತೀಚೆಗಷ್ಟೇ ಎರಡು ಪಂದ್ಯಗಳ ಮೊದಲ ಟೆಸ್ಟ್​ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್​ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ ಬಾಂಗ್ಲಾದೇಶ, ಈ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿತು. ಸದ್ಯ ಈ ಸೋಲು ಪಾಕಿಸ್ತಾನಕ್ಕೆ ನುಂಗಲಾರದ ಉಗುಳಲಾಗದ ಬಿಸಿ ತುಪ್ಪದಂತಾಗಿದೆ. ಇನ್ನು ತಂಡದ ಆಟಗಾರರ ವಿರುದ್ಧ ಸಿಡಿದೆದ್ದ ಹೆಡ್​ ಕೋಚ್​, ಅತ್ಯಂತ ಕಳಪೆ ಫಾರ್ಮ್​ನಿಂದ ತಮಗೆ ಉಂಟಾದ ಹೊಡೆತವನ್ನು ವಿವರಿಸಿ, ಪ್ರತಿಯೊಬ್ಬರಿಗೂ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ ಪುರುಷರ ಕ್ರಿಕೆಟ್​ ತಂಡವು ಮಂದಗತಿಯ ಓವರ್​ಗಾಗಿ ಐಸಿಸಿಯಿಂದ ಆರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಕಳೆದುಕೊಂಡಿದೆ. ಸದ್ಯ ಈ ಸಂಗತಿ ತಂಡದ ಹೆಡ್​ ಕೋಚ್ ಆಗಿರುವ ಗಿಲ್ಲೆಸ್ಪಿಗೆ ಭಾರೀ ಅಸಮಾಧಾನವನ್ನು ಉಂಟುಮಾಡಿದೆ. ಶಾನ್ ಮಸೂದ್ ಕ್ಯಾಪ್ಟನ್ಸಿಯಲ್ಲಿ ಬಾಂಗ್ಲಾ ಎದುರು ಪಂದ್ಯವನ್ನಾಡಿದ ತಂಡವು ಇದೀಗ ವೆಸ್ಟ್ ಇಂಡೀಸ್‌ ಸರಣಿ ಸಮೀಪಿಸುವ ಮುನ್ನವೇ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಚ್​, "ಇಲ್ಲಿ ಇಡೀ ತಂಡವನ್ನು ಗುರಿಯಾಗಿಸಿಯೇ ಮಾತನಾಡಲು ನಾನು ಬಯಸುತ್ತೀನಿ. ಕಾರಣ, ನಾವು ಮಾಡಿದ ಸ್ಲೋ-ಓವರ್​ ರೇಟ್​ನಿಂದ ಈ ಫಲಿತಾಂಶ ನಮಗೆ ಸಿಕ್ಕಿದೆ. ಮೊದಲ ಟೆಸ್ಟ್​ನಲ್ಲೇ ಅತ್ಯಂತ ಕಳಪೆ ಪ್ರದರ್ಶನ! ಇದು ಖಂಡಿತ ಒಪ್ಪುವಂತದಲ್ಲ" ಎಂದು ಗಿಲ್ಲೆಸ್ಪಿ ಹೇಳಿದರು.

ಇನ್ನು ಪಾಕಿಸ್ತಾನದ ಬ್ಯಾಟಿಂಗ್​ ಕ್ರಮಾಂಕದಲ್ಲಿ ಟಾಪ್​ ಆರ್ಡರ್​ ಬ್ಯಾಟರ್‌ಗಳು ಮೈದಾನದಲ್ಲಿ ರನ್​ ಗಳಿಸಲು ತೀವ್ರ ಹೆಣಗಾಡುತ್ತಿದ್ದು, ಕ್ಯಾಪ್ಟನ್​ ಶಾನ್ ಮಸೂದ್ ಮತ್ತು ಬಾಬರ್ ಆಜಂ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಓಪನಿಂಗ್ ಬ್ಯಾಟರ್​ಗಳಾಗಿ ಕಣಕ್ಕಿಳಿಯುವ ಈ ಸ್ಟಾರ್​ ಬ್ಯಾಟ್ಸ್​ಮನ್​ಗಳು ಉತ್ತಮ ಇನ್ನಿಂಗ್ಸ್​ ಕೊಡುವಲ್ಲಿ ವಿಫಲರಾಗುತ್ತಿದ್ದಾರೆ. ಮಸೂದ್ ತಮ್ಮ ಕೊನೆಯ 13 ಟೆಸ್ಟ್ ಪಂದ್ಯಗಳಲ್ಲಿ ಒಂದೇ ಒಂದು ಶತಕವನ್ನು ಗಳಿಸಿಲ್ಲ. ಕಳೆದ ವರ್ಷ ಟೆಸ್ಟ್ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತಂಡವನ್ನು ಮುನ್ನಡೆಸಿದ ಮಸೂದ್​ಗೆ ಉಂಟಾಗಿದ್ದು ಭಾರೀ ಮುಖಭಂಗ. 3-0 ಅಂತರದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಕಾಂಗರೂ ಪಡೆ, ಅಂದು ಸರಣಿ ಗೆದ್ದು ಸಂಭ್ರಮಿಸಿತು. ಈ ಸೀರಿಸ್​ನಲ್ಲಿ ಒಂದೆರಡು ಅರ್ಧ ಶತಕಗಳನ್ನು ಗಳಿಸಿದ್ದ ಶಾನ್​, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಆದ್ರೆ, ಈಗ ಅದೂ ಕೂಡ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net