

ಲಾಹೋರ್: ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಈಗಿದ್ದ ತನ್ನ ಸ್ಥಾನದಿಂದ ಕುಸಿತ ಕಂಡಿದ್ದು, ಅಗ್ರಸ್ಥಾನವನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ. ರಿಷಭ್ ಪಂತ್ ಬಿಟ್ಟರೆ, ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ನಿಂದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳು ಹಾಗೂ ತಂಡದ ಬೇಸರಕ್ಕೆ ಕಾರಣವಾಗಿದೆ. ಇನ್ನು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಹೀನಾಯ ಸೋಲಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಪ್ಲ್ಯಾನಿಂಗ್ಗಳೇ ಕಾರಣ ಎಂದು ಪಾಕಿಸ್ತಾನದ ಮಾಜಿ ಆಟಗಾರ (Pak Former Cricketer) ಟೀಕಿಸಿ, ಮಾತನಾಡಿದ್ದಾರೆ.
ಐಪಿಎಲ್ನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್, ಇಲ್ಲಿಯೂ ಸಹ ಅದೇ ಪ್ಲ್ಯಾನಿಂಗ್ ಮಾಡಲು ಹೋಗಿ ಮುಗ್ಗರಿಸಿದ್ದಾರೆ ಎಂದು ಟೀಕಿಸಿರುವ ಬಸಿತ್ ಅಲಿ, "ಐಪಿಎಲ್ ಲೀಗ್ನಲ್ಲಿ ಆಡಿದಂತೆ ಟೆಸ್ಟ್ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ. ಐದು ದಿನಗಳ ಆಟವನ್ನು ಐದು ದಿನದಂತೆಯೇ ಆಡಬೇಕು. ಟೆಸ್ಟ್ ಹಾಗೂ ಐಪಿಎಲ್ಗೆ ಬಹಳ ದೊಡ್ಡ ವ್ಯತ್ಯಾಸವಿದೆ. ಟೆಸ್ಟ್ ಕ್ರಿಕೆಟ್ ಅನ್ನು ಟಿ20 ಸಂಪೂರ್ಣವಾಗಿ ನಾಶಗೊಳಿಸುತ್ತದೆ" ಎಂದಿದ್ದಾರೆ.
"ಭಾರತಕ್ಕೆ ಈಗ ರಾಹುಲ್ ದ್ರಾವಿಡ್ ಅವರ ನೆನಪು ಕಾಡ್ತಿದೆ ಅನಿಸುತ್ತಿದೆ. ಮುಂಬೈನಲ್ಲಿ ಸ್ಪಿನ್ನಿಂಗ್ ಟ್ರ್ಯಾಕ್ ಟೀಮ್ ಇಂಡಿಯಾ ಆಟಗಾರರಿಗೆ ಉತ್ತಮ ಫಲಿತಾಂಶ ತಂದುಕೊಡಲಿಲ್ಲ. ಈಗ ನೀವು ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದೀರಿ. ನ್ಯೂಜಿಲೆಂಡ್ ವಿರುದ್ಧದ ಸೋಲು ಆಟಗಾರರ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ" ಎಂದು ಗೌತಮ್ ಗಂಭೀರ್ ಅವರ ಐಪಿಎಲ್ ಪ್ಲ್ಯಾನಿಂಗ್ ಕಿವೀಸ್ ವಿರುದ್ಧದ ಸೋಲಿಗೆ ಕಾರಣವಾಯಿತು ಎಂದು ಬಸಿತ್ ಟೀಕಿಸಿದ್ದಾರೆ,(ಏಜೆನ್ಸೀಸ್).