

ಚೆನ್ನೈ: ಎಡಗೈ ಬ್ಯಾಟರ್ ದೇವದತ್ ಪಡಿಕಲ್ (151*ರನ್, 216 ಎಸೆತ, 12 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ತನ್ನ 6ನೇ ಲೀಗ್ ಪಂದ್ಯದಲ್ಲಿ ಆತಿಥೇಯ ತಮಿಳುನಾಡು ಎದುರು ಗೌರವಯುತ ಮೊತ್ತದತ್ತ ಮುನ್ನಡೆದಿದೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಕರ್ನಾಟಕ ತಂಡ ಮೊದಲ ದಿನದಂತ್ಯಕ್ಕೆ 90 ಓವರ್ಗಳಲ್ಲಿ 5 ವಿಕಟ್ಗೆ 288 ರನ್ ಪೇರಿಸಿದೆ. ಶತಕವೀರ ಪಡಿಕ್ಕಲ್ ಜತೆಗೆ ಹಾರ್ದಿಕ್ ರಾಜ್ (35*) ಕ್ರೀಸ್ನಲ್ಲಿದ್ದಾರೆ. ದೇವದತ್ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 6ನೇ ಮತ್ತು ಹಾಲಿ ರಣಜಿ ಟ್ರೋಫಿಯಲ್ಲಿ 3ನೇ ಶತಕ ಸಿಡಿಸಿದರು.
ಪಡಿಕ್ಕಲ್ ಏಕಾಂಗಿ ಆರ್ಭಟ
ರಾಜ್ಯ ತಂಡದ ಇತರ ಪ್ರಮುಖ ಬ್ಯಾಟರ್ಗಳ ವೈಲ್ಯ ಮುಂದುವರಿದ ನಡುವೆ ದೇವದತ್ ಪಡಿಕ್ಕಲ್, ಮೊದಲ ದಿನದಾಟದಲ್ಲಿ ರಾಜ್ಯ ತಂಡ ಗಳಿಸಿದ ಮೊತ್ತದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಕೊಡುಗೆ ನೀಡಿ ಏಕಾಂಗಿ ಹೋರಾಟ ತೋರಿದರು. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಚತುರ್ದಿನ ಪಂದ್ಯಕ್ಕೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದ ಕಾರಣ ಪಡಿಕ್ಕಲ್ ಕಳೆದೆರಡು ರಣಜಿ ಪಂದ್ಯ ತಪ್ಪಿಸಿಕೊಂಡಿದ್ದರು. 2ನೇ ವಿಕೆಟ್ಗೆ ಆರ್. ಸಮರ್ಥ್ (57) ಜತೆಗೆ 132 ರನ್ ಜತೆಯಾಟವಾಡುವ ಮೂಲಕ ರಾಜ್ಯ ತಂಡಕ್ಕೆ ಆರಂಭಿಕ ಆಘಾತದಿಂದ ಚೇತರಿಕೆ ಒದಗಿಸಿದ ಪಡಿಕ್ಕಲ್ ದಿನದಂತ್ಯದಲ್ಲಿ ಹಾರ್ದಿಕ್ ರಾಜ್ ಜತೆಗೆ ಮುರಿಯದ 6ನೇ ವಿಕೆಟ್ಗೆ 54 ರನ್ ಸೇರಿಸಿ ತಂಡ ಸಾಧಾರಣ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.
ಮಯಾಂಕ್, ನಿಕಿನ್ಗೆ ನಿರಾಸೆ
ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಕರಣದ ಬಳಿಕ ಚೇತರಿಸಿಕೊಂಡು ಮರಳಿ ಕಣಕ್ಕಿಳಿದ ನಾಯಕ ಮಯಾಂಕ್ ಅಗರ್ವಾಲ್ (20) ಹೆಚ್ಚುಕಾಲ ಕ್ರೀಸ್ನಲ್ಲಿ ನಿಲ್ಲದೆ, ಎದುರಾಳಿ ನಾಯಕ ಹಾಗೂ ಸ್ಪಿನ್ನರ್ ಸಾಯಿ ಕಿಶೋರ್ಗೆ (94ಕ್ಕೆ 3) ವಿಕೆಟ್ ಒಪ್ಪಿಸಿದರು. ಹಂಗಾಮಿ ನಾಯಕನಾಗಿ ಆಡಿದ ಕಳೆದ ಪಂದ್ಯದಲ್ಲಿ ಅವಳಿ ಸೊನ್ನೆ ಸುತ್ತಿದ್ದ ನಿಕಿನ್ ಜೋಸ್ (13) ಈ ಸಲವೂ ವೈಲ್ಯ ಮುಂದುವರಿಸಿದರು. ಕಳೆದ ಪಂದ್ಯದ ಗೆಲುವಿನ ಹೀರೋ ಮನೀಷ್ ಪಾಂಡೆ (1) ಈ ಬಾರಿ ಖಾತೆ ತೆರೆದಿದ್ದಷ್ಟೇ ಸಾಧನೆ. ಕಿಶನ್ ಬಿದರೆ (3) ಕಿಶೋರ್ ಸ್ಪಿನ್ ಜಾಲಕ್ಕೆ ಬಿದ್ದರು. 8 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ರಾಜ್ಯ ತಂಡಕ್ಕೆ ಪಡಿಕ್ಕಲ್-ಹಾರ್ದಿಕ್ ಜೋಡಿ ಆಧಾರವಾಯಿತು.
ಕೌಶಿಕ್ ಬದಲಿಗೆ ಶಶಿಕುಮಾರ್
ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಮರಳಿ ತಂಡ ಕೂಡಿಕೊಂಡ ಕಾರಣ ನಿರೀಕ್ಷೆಯಂತೆಯೇ ಡಿ. ನಿಶ್ಚಲ್ ಮತ್ತು ಕೆವಿ ಅನೀಶ್ ಹೊರಗುಳಿದರು. ಇನ್ನು ಪಿಚ್ ಗಮನದಲ್ಲಿಟ್ಟುಕೊಂಡು 3ನೇ ವೇಗಿ ಬದಲಿಗೆ 2ನೇ ಸ್ಪಿನ್ನರ್ಗೆ ರಾಜ್ಯ ತಂಡ ಆದ್ಯತೆ ನೀಡಿದ ಕಾರಣ, ವಾಸುಕಿ ಕೌಶಿಕ್ ಹೊರಗುಳಿದರು ಮತ್ತು ಯುವ ಆ್ ಸ್ಪಿನ್ನರ್ ಶಶಿಕುಮಾರ್ ಸ್ಥಾನ ಪಡೆದರು.
ಕರ್ನಾಟಕ: 90 ಓವರ್ಗಳಲ್ಲಿ 5 ವಿಕೆಟ್ಗೆ 288 (ಸಮರ್ಥ್ 57, ಮಯಾಂಕ್ 20, ಪಡಿಕ್ಕಲ್ 151*, ನಿಕಿನ್ ಜೋಸ್ 13, ಮನೀಷ್ ಪಾಂಡೆ 1, ಕಿಶನ್ ಬಿದರೆ 3, ಹಾರ್ದಿಕ್ ರಾಜ್ 35*, ಸಾಯಿ ಕಿಶೋರ್ 94ಕ್ಕೆ 3, ಅಜಿತ್ ರಾಮ್ 53ಕ್ಕೆ 2).