ಪ್ಯಾರಿಸ್​ ಒಲಿಂಪಿಕ್ಸ್​ ಪದಕಗಳಲ್ಲಿ ಕಬ್ಬಿಣ! ಇವು ಐಫೆಲ್​ ಟವರ್​ ಲೋಹದ ತುಂಡುಗಳು​!

paris olympics web
Published on

ಪ್ಯಾರಿಸ್​: ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಮೊದಲ 3 ಸ್ಥಾನ ಪಡೆಯುವ ಕ್ರೀಡಾಪಟುಗಳ ಕೊರಳಿಗೆ ಹಾಕಲಾಗುವ ಪದಕಗಳಲ್ಲಿ ಬರೀ ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲದೆ ಕಬ್ಬಿಣವೂ ಇರಲಿದೆ! ಆದರೆ ಇದು ಅಂತಿಂಥ ಕಬ್ಬಿಣವಲ್ಲ. ಪ್ಯಾರಿಸ್​ ನಗರದ ಜಗದ್ವಿಖ್ಯಾತ ಐಫೆಲ್​ ಟವರ್​ನ ಕಬ್ಬಿಣದ ತುಂಡುಗಳಾಗಿವೆ! ಜುಲೈ 26ರಿಂದ ಆಗಸ್ಟ್​ 11ರವರೆಗೆ ಪ್ಯಾರಿಸ್​ನಲ್ಲಿ ನಡೆಯಲಿರುವ 33ನೇ ಆವೃತ್ತಿಯ ಒಲಿಂಪಿಕ್ಸ್​ ಕ್ರೀಡಾಕೂಟದ ವಿಜೇತರಿಗೆ ನೀಡಲಾಗುವ ಪದಕಗಳ ಕ್ರಾಂತಿಕಾರಿ ವಿನ್ಯಾಸವನ್ನು ಗುರುವಾರ ಸಂಟಕರು ಅನಾವರಣಗೊಳಿಸಿದರು.

ಫ್ರೆಂಚ್​ ಕ್ರಾಂತಿಯ 100ನೇ ವರ್ಷಾಚರಣೆಯ ಅಂಗವಾಗಿ 1889ರಲ್ಲಿ "ವರ್ಲ್ಡ್ಸ್​ ಫೇರ್​' ಉತ್ಸವದ ವೇಳೆ 18,038 ಕಬ್ಬಿಣದ ಭಾಗಗಳಿಂದ 330 ಮೀಟರ್​ (1,083 ಅಡಿ) ಎತ್ತರದ ಟವರ್​ ನಿರ್ಮಿಸಲಾಗಿತ್ತು. ಇಂಜಿನಿಯರ್​ ಗುಸ್ಟವ್​ ಐಫೆಲ್​ 20 ವರ್ಷಗಳ ಬಾಳಿಕೆಗಾಗಿ ಈ ಟವರ್​ ನಿರ್ಮಿಸಿದ್ದರು. ಆದರೆ ಕಾಲಕಾಲಕ್ಕೆ ಇದರ ನವೀಕರಣ ಕೆಲಸಗಳನ್ನು ಮಾಡುತ್ತ ಬಂದಿರುವ ಕಾರಣ ಇದೀಗ ಐಫೆಲ್​ ಟವರ್​ 135ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಟವರ್​ ಈಗಾಗಲೆ 2 ಪ್ಯಾರಿಸ್​ ಒಲಿಂಪಿಕ್ಸ್​ಗಳನ್ನೂ (1900, 1924) ನೋಡಿದೆ.

ಐಫೆಲ್​ ಟವರ್​ ನವೀಕರಣ ಕೆಲಸದ ವೇಳೆ ಕತ್ತರಿಸಲ್ಪಟ್ಟ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅವುಗಳನ್ನು ಈಗ ಒಲಿಂಪಿಕ್ಸ್​ ಪದಕಗಳಲ್ಲಿ ಬಳಸಲಾಗುತ್ತಿದೆ. ಪ್ರತಿ ಪದಕವೂ 18 ಗ್ರಾಂ ಭಾರದ ಕಬ್ಬಿಣದ ತುಂಡನ್ನು ಒಳಗೊಂಡಿರಲಿದೆ. ಪದಕಗಳ ಹೊರಮುಖದಲ್ಲಿ ಜೋಡಿಸಲಾದ ಷಡ್ಭುಜಾಕೃತಿಯ ಈ ಕಬ್ಬಿಣದ ತುಂಡುಗಳಿಗೆ ಪಾಲಿಶ್​ ಹಾಕಲಾಗಿದ್ದು, "ಪ್ಯಾರಿಸ್​ 2024' ಎಂದು ಅದರ ಮೇಲೆ ಬರೆಯಲಾಗಿದೆ. ಜತೆಗೆ ಪ್ಯಾರಿಸ್​ ಒಲಿಂಪಿಕ್ಸ್​ ಲಾಂಛನ ಮತ್ತು ಒಲಿಂಪಿಕ್ಸ್​ ರಿಂಗ್​ಗಳೂ ಇದರ ಮೇಲೆ ಮುದ್ರಿಸಲ್ಪಟ್ಟಿವೆ. ಫ್ರಾನ್ಸ್​ ದೇಶದ ನೆ ಷಡ್ಭುಜಾಕೃತಿಯಲ್ಲಿದೆ. ಹೀಗಾಗಿ ಕಬ್ಬಿಣದ ತುಂಡನ್ನು ಅದೇ ರೀತಿ ವಿನ್ಯಾಸಗೊಳಿಸಲಾಗಿದೆ. ಪ್ಯಾರಿಸ್​ ಜ್ಯುವೆಲ್ಲರಿ ಹೌಸ್​ "ಚೌಮೆಟ್​' ಈ ಪದಕಗಳನ್ನು ವಿನ್ಯಾಸಗೊಳಿಸಿದೆ.

ಒಲಿಂಪಿಕ್ಸ್​ ಪದಕಗಳ ಬೆನ್ನಹಿಂದೆ, 1928ರಿಂದ ಇದುವರೆಗಿನ ಎಲ್ಲ ಒಲಿಂಪಿಕ್ಸ್​ ಪದಕಗಳಲ್ಲಿರುವಂತೆ ಗ್ರೀಕ್​ ಪ್ರಾಚಿನ ವಿಜಯ ದೇವತೆ "ನೈಕ್​' ಚಿತ್ರವಿರಲಿದೆ. ಜತೆಗೆ ಐೆಲ್​ ಟವರ್​ ಚಿತ್ರವನ್ನೂ ಸಣ್ಣದಾಗಿ ಮುದ್ರಿಸಲಾಗಿದೆ. ಆಗಸ್ಟ್​ 28ರಿಂದ ಸೆಪ್ಟೆಂಬರ್​ 8ರವರೆಗೆ ಪ್ಯಾರಿಸ್​ನಲ್ಲೇ ನಡೆಯಲಿರುವ ಪ್ಯಾರಾಲಿಂಪಿಕ್ಸ್​ನಲ್ಲೂ ಇದೇ ರೀತಿಯ ವಿನ್ಯಾಸದ ಪದಕಗಳನ್ನು ವಿತರಿಸಲಾಗುತ್ತದೆ.

5,084: ಪ್ಯಾರಿಸ್​ ಗೇಮ್ಸ್​ಗಾಗಿ ಒಟ್ಟು 5,084 ಪದಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಪೈಕಿ 2,600 ಒಲಿಂಪಿಕ್ಸ್​ ಮತ್ತು 2,400 ಪ್ಯಾರಾಲಿಂಪಿಕ್ಸ್​ನಲ್ಲಿ ವಿತರಣೆಯಾಗಲಿವೆ. ಎಂದಿನಂತೆ ಅಗತ್ಯಕ್ಕಿಂತ ಸ್ವಲ್ಪ ಅಧಿಕ ಪದಕಗಳನ್ನೇ ತಯಾರಿಸಲಾಗುತ್ತಿದೆ.

*ಒಲಿಂಪಿಕ್ಸ್​ ಪದಕಗಳಿಗೆ ನಾವು ಫ್ರೆಂಚ್​ ಟಚ್​ ನೀಡಲು ಬಯಸಿದ್ದೆವು. ಹೀಗಾಗಿ ಅದರೊಂದಿಗೆ ಐಫೆಲ್​ ಟವರ್​ಅನ್ನು ಜೋಡಿಸಲು ಯೋಚಿಸಿದೆವು. ಐಫೆಲ್​ ಟವರ್​ ಆಪರೇಟಿಂಗ್​ ಕೋ.ಅನ್ನು ನಾವು ಸಂಪರ್ಕಿಸಿದಾಗ ಅವರು ಒಪ್ಪಿಕೊಂಡರು. ಆಗ ನಮ್ಮ ಕನಸು ನನಸಾಯಿತು. ಈ ಕಬ್ಬಿಣದ ತುಂಡುಗಳು ಇತಿಹಾಸದ ಭಾಗವೂ ಆಗಿವೆ.

| ಜೋಕಿಮ್​ ರಾಂನ್ಸಿನ್​, ಪ್ಯಾರಿಸ್​ ಗೇಮ್ಸ್​ ಸಂಘಟನಾ ಸಮಿತಿ ಮುಖ್ಯಸ್ಥ

ಚಿನ್ನದ ಪದಕದಲ್ಲಿ 6 ಗ್ರಾಂ ಚಿನ್ನ!

ಪ್ಯಾರಿಸ್​ ಒಲಿಂಪಿಕ್ಸ್​ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದವರಿಗೆ ನೀಡಲಾಗುವ ಚಿನ್ನದ ಪದಕವೊಂದು 529 ಗ್ರಾಂ ಭಾರವಿರುತ್ತದೆ ಮತ್ತು ಇದು ಸಂಪೂರ್ಣವಾಗಿ ಚಿನ್ನದ್ದಾಗಿರುವುದಿಲ್ಲ. ಬೆಳ್ಳಿಯಿಂದ ಮಾಡಿದ ಪದಕಕ್ಕೆ 6 ಗ್ರಾಂ ಚಿನ್ನವನ್ನು ಲೇಪಿಸಲಾಗುತ್ತದೆ. ಬೆಳ್ಳಿ ಪದಕ 525 ಗ್ರಾಂ ಭಾರವಿದ್ದರೆ, ಕಂಚಿನ ಪದಕ 455 ಗ್ರಾಂ ಇರುತ್ತದೆ ಮತ್ತು ಇದು ತಾಮ್ರ, ತವರ ಮತ್ತು ಸತು ಮಿಶ್ರಲೋಹದಿಂದ ಕೂಡಿರುತ್ತದೆ. ಪದಕಗಳು 85 ಮಿಲಿಮೀಟರ್​ ಅಗಲ ಮತ್ತು 9.2 ಮಿಲಿಮೀಟರ್​ ದಪ್ಪವಿದೆ. ಪದಕಗಳ ತಯಾರಿಕೆಯ ನಗದು ಮೌಲ್ಯ ಎಷ್ಟೆಂದು ಸಂಘಟಕರು ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net