ರಣಜಿ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಪಡಿಕ್ಕಲ್​, ಪಾಂಡೆ ಶತಕದ ಬಲ; ಪಂಜಾಬ್​ ಎದುರು ಬೃಹತ್​ ಮುನ್ನಡೆ

kar ranji web
Published on

ಹುಬ್ಬಳ್ಳಿ: ಯುವ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ (193 ರನ್​, 216 ಎಸೆತ, 24 ಬೌಂಡರಿ, 4 ಸಿಕ್ಸರ್​) ದ್ವಿಶತಕವಂಚಿತ ಬ್ಯಾಟಿಂಗ್​ ಹಾಗೂ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ (118 ರನ್​, 165 ಎಸೆತ, 13 ಬೌಂಡರಿ, 3 ಸಿಕ್ಸರ್​) ಭರ್ಜರಿ ಶತಕದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಸಿ ಗುಂಪಿನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಬೃಹತ್​ ಮುನ್ನಡೆ ಸಾಧಿಸಿದೆ.

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 2ನೇ ದಿನದಂತ್ಯಕ್ಕೆ ಕರ್ನಾಟಕ 6 ವಿಕೆಟ್​ ನಷ್ಟಕ್ಕೆ 461 ರನ್​ ಗಳಿಸಿದ್ದು, ಮೊದಲ ಇನಿಂಗ್ಸ್​ನಲ್ಲಿ 309 ರನ್​ಗಳ ಭಾರಿ ಮುನ್ನಡೆ ಕಂಡಿದೆ. ಶರತ್​ (55*ರನ್​, 158 ಎಸೆತ, 5 ಬೌಂಡರಿ) ಹಾಗೂ ವೈಶಾಕ್​ ವಿಜಯಕುಮಾರ್​ (15*) ಭಾನುವಾರಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಶತಕವೀರರಾದ ಪಡಿಕ್ಕಲ್​&ಪಾಂಡೆ ಜೋಡಿ 4ನೇ ವಿಕೆಟ್​ಗೆ 234 ರನ್​ ಸೇರಿಸಿದ್ದು, ಅತಿಥೇಯರ ಬೃಹತ್​ ಮೊತ್ತಕ್ಕೆ ಕಾರಣವಾಯಿತು. ಪ್ರವಾಸಿ ತಂಡ ಪಂಜಾಬ್​ ಪ್ರಥಮ ಇನಿಂಗ್ಸ್​ನಲ್ಲಿ 152 ರನ್​ಗಳಿಗೆ ಆಲೌಟ್​ ಆಗಿತ್ತು.

ಪಡಿಕ್ಕಲ್​-ಮನೀಷ್​ ಭರ್ಜರಿ ಜತೆಯಾಟ

ಬೆಳಗ್ಗೆ 3 ವಿಕೆಟ್​ಗೆ 142 ರನ್​ಗಳಿಂದ ಆಟ ಮುಂದುವರಿಸಿದ ಕರ್ನಾಟಕ ದಿನದ 3ನೇ ಓವರ್​ನಲ್ಲೇ ಇನಿಂಗ್ಸ್​ ಮುನ್ನಡೆ ಸಾಧಿಸಿತು. ನಂತರ ವೇಗಿ ಬಲ್ತೇಜ್​ ಸಿಂಗ್​ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ದೇವದತ್​ ಪಡಿಕ್ಕಲ್​ ಶತಕ ಪೂರೈಸಿದರು. ಪಡಿಕ್ಕಲ್​ ಹಾಗೂ ಮನೀಷ್​ ಪಾಂಡೆ ಇಬ್ಬರೂ ಪಂಜಾಬ್​ ಬೌಲರ್​ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಅವಕಾಶ ಸಿಕ್ಕಾಗಲೆಲ್ಲ ಬೌಂಡರಿ ಬಾರಿಸಿ ಉತ್ತಮ ರನ್​ ಧಾರಣೆಯನ್ನು ಕಾಯ್ದುಕೊಂಡರು. ಭೋಜನ ವಿರಾಮ ಬಳಿಕ ಅಭಿಷೇಕ್​ ಶರ್ಮ ಬೌಲಿಂಗ್​ನಲ್ಲಿ ಸತತ 2 ಸಿಕ್ಸರ್​ ಸಿಡಿಸಿ ಪಡಿಕ್ಕಲ್​ ದ್ವಿಶತಕದ ಹತ್ತಿರ ಬಂದರು. ಆದರೆ, ಪ್ರೇರಿತ್​ ದತ್ತ್​ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಹೋಗಿ ಬೌಂಡರಿಗೆರೆ ಬಳಿ ಬಲ್ತೇಜ್​ ಸಿಂಗ್​ಗೆ ಕ್ಯಾಚ್​ ನೀಡಿ ಅರ್ಹ ದ್ವಿಶತಕ ತಪ್ಪಿಸಿಕೊಂಡರು. ಬಳಿಕ ಪಂಜಾಬ್​ ಬೌಲರ್​ಗಳು, ರಾಜ್ಯದ ಬ್ಯಾಟರ್​ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡರು. ಈ ನಡುವೆ ಮನೀಷ್​ ಪಾಂಡೆ, ಪ್ರೇರಿತ ದತ್ತ ಎಸೆತದಲ್ಲಿ 1 ರನ್​ ಗಳಿಸಿ ಶತಕ ಪೂರೈಸಿದರು. ಪಾಂಡೆ ಔಟಾದ ನಂತರ ವಿಕೆಟ್​ ಕೀಪರ್​ ಎಸ್​. ಶರತ್​ ಹಾಗೂ ಶುಭಾಂಗ್​ ಹೆಗ್ಡೆ 6ನೇ ವಿಕೆಟ್​ಗೆ 59 ರನ್​ ಸೇರಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

ಪಡಿಕಲ್​ ಜೀವನಶ್ರೇಷ್ಠ ಆಟ

ದೇವದತ್​ ಪಡಿಕ್ಕಲ್​ಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಇದು 3ನೇ ಶತಕ ಮತ್ತು ಜೀವನಶ್ರೇಷ್ಠ ಗಳಿಕೆಯಾಗಿದೆ. 2021&22ರಲ್ಲಿ ಪುದುಚೇರಿ ಎದುರು 178 ರನ್​ ಬಾರಿಸಿದ್ದು ಹಿಂದಿನ ಗರಿಷ್ಠ ಗಳಿಕೆಯಾಗಿತ್ತು. ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 24ನೇ ಶತಕ ಸಿಡಿಸಿದರು.

ಪಂಜಾಬ್​: 152; ಕರ್ನಾಟಕ: 123 ಓವರ್​ಗಳಲ್ಲಿ 6 ವಿಕೆಟ್​ಗೆ 461 (ದೇವದತ್​ ಪಡಿಕ್ಕಲ್​ 193, ಮನೀಷ್​ ಪಾಂಡೆ 118, ಎಸ್​. ಶರತ್​ 55*., ಶುಭಾಂಗ್​ ಹೆಗ್ಡೆ 27, ವೈಶಾಖ್​ 15*., ಅರ್ಷದೀಪ್​ ಸಿಂಗ್​ 71ಕ್ಕೆ 2, ಪ್ರೇರಿತ್​ ದತ್ತ 84ಕ್ಕೆ 2, ನಮನ್​ ಧೀರ್​ 46ಕ್ಕೆ 2).

*ಈ ಮೈದಾನದಲ್ಲಿ ಪ್ರಾರಂಭದಲ್ಲಿ ರನ್​ ಗಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಂತ ನನ್ನ ಬ್ಯಾಟಿಂಗ್​ ಶೈಲಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡಿಲ್ಲ. ಕಳೆದ 2 ವರ್ಷ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ನಿಜವಾಗಿಯೂ ನಿರಾಸೆಯಾಗಿತ್ತು. ಈ ಬಾರಿ ಮೊದಲ ಪಂದ್ಯದಲ್ಲೇ ಶತಕ ಗಳಿಸಿರುವ ಸಂತಸ ತಂದಿದೆ. ಟೂರ್ನಿಯುದ್ದಕ್ಕೂ ಇದೇ ರೀತಿ ಪ್ರದರ್ಶನ ಮುಂದುವರಿಸಿಕೊಂಡು ಹೋಗಲು ಬಯಸುತ್ತೇನೆ. ರಣಜಿ ಪಂದ್ಯದ ಪ್ರತಿ ಶತಕವೂ ವಿಶೇಷವಾದದ್ದು.

: ದೇವದತ್​ ಪಡಿಕ್ಕಲ್​, ಕರ್ನಾಟಕ ತಂಡದ ಬ್ಯಾಟರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net