

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ 2023ರ ಸಾಲಿನ ಐಸಿಸಿ ವರ್ಷದ ಕ್ರಿಕೆಟಿಗರಿಗೆ ನೀಡಲಾಗುವ ಸರ್ ಗ್ಯಾರಿ ಸೋಬರ್ಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
2023ರಲ್ಲಿ ನಾಯಕ ಮತ್ತು ವೇಗದ ಬೌಲರ್ ಆಗಿ ಭರ್ಜರಿ ಯಶಸ್ಸು ಕಂಡ ಆಸ್ಟ್ರೆಲಿಯಾದ ಪ್ಯಾಟ್ ಕಮ್ಮಿನ್ಸ್ ಮತ್ತು ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಟ್ರಾವಿಸ್ ಹೆಡ್ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿರುವ ಮತ್ತಿಬ್ಬರು ಆಟಗಾರರಾಗಿದ್ದಾರೆ.
ಮಾಜಿ ನಾಯಕ ವಿರಾಟ್ ಕೊಹ್ಲಿ 2023ರಲ್ಲಿ ಆಡಿದ ಒಟ್ಟು 35 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2,048 ರನ್ ಸಿಡಿಸಿದ್ದರೆ, ರವೀಂದ್ರ ಜಡೇಜಾ 35 ಪಂದ್ಯಗಳಲ್ಲಿ 613 ರನ್ ಮತ್ತು 66 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ ವಿಶ್ವ ಚಾಂಪಿಯನ್ಷಿಪ್, ಏಕದಿನ ವಿಶ್ವಕಪ್ ಮತ್ತು ಆಶಸ್ ಟ್ರೋಫಿ ಬೀಗಿದ ಕಮ್ಮಿನ್ಸ್ 24 ಪಂದ್ಯಗಳಲ್ಲಿ 59 ವಿಕೆಟ್ ಮತ್ತು 422 ರನ್ ಗಳಿಸಿದ್ದಾರೆ. ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಮತ್ತು ಏಕದಿನ ವಿಶ್ವಕಪ್ ೈನಲ್ಗಳಲ್ಲಿ ಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿದ್ದ ಟ್ರಾವಿಸ್ ಹೆಡ್ 31 ಪಂದ್ಯಗಳಲ್ಲಿ 1,698 ರನ್ ಬಾರಿಸಿದ್ದಾರೆ.
ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಆರ್. ಅಶ್ವಿನ್, ಆಸ್ಟ್ರೆಲಿಯಾದ ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ ಮತ್ತು ಇಂಗ್ಲೆಂಡ್ನ ಜೋ ರೂಟ್ ಜತೆಗೆ ಪೈಪೋಟಿ ನಡೆಸಲಿದ್ದಾರೆ. ಅಶ್ವಿನ್ 2023ರಲ್ಲಿ ಆಡಿದ 7 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್ ಕಬಳಿಸಿದ್ದಾರೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ 4 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿ ಮಿಂಚಿದ್ದರು.
ಮಹಿಳೆಯರ ವಿಭಾಗದಲ್ಲಿ ವರ್ಷದ ಕ್ರಿಕೆಟರ್ ಪ್ರಶಸ್ತಿಗೆ ಶ್ರೀಲಂಕಾದ ಚಾಮರಿ ಅಟಪಟ್ಟು, ಆಸ್ಟ್ರೆಲಿಯಾದ ಬೆತ್ ಮೂನಿ, ಆಶ್ಲೆ ಗಾರ್ಡ್ನರ್ ಮತ್ತು ಇಂಗ್ಲೆಂಡ್ನ ನಾಟ್ ಸೀವರ್-ಬ್ರಂಟ್ ನಾಮನಿರ್ದೇಶನಗೊಂಡಿದ್ದಾರೆ. ಇನ್ನು ಐಸಿಸಿ ವೆಬ್ಸೈಟ್ನಲ್ಲಿ ಅಭಿಮಾನಿಗಳಿಂದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಜನವರಿ ಕೊನೇ ವಾರದಲ್ಲಿ ಪ್ರಶಸ್ತಿ ವಿಜೇತರ ಹೆಸರು ಪ್ರಕಟಗೊಳ್ಳುವ ನಿರೀಕ್ಷೆ ಇದೆ