ಚಾಹಲ್-ಪಡಿಕಲ್ ಸಾಹಸ, ಲಯ ಕಂಡ ಕೊಹ್ಲಿ, ಆರ್‌ಸಿಬಿಗೆ 3ನೇ ಗೆಲುವು

rcb web
Published on

ಅಬುಧಾಬಿ: ಸ್ಪಿನ್ನರ್ ಯಜುವೇಂದ್ರ ಚಾಹಲ್ (24ಕ್ಕೆ 3) ಮತ್ತು ಯುವ ಆರಂಭಿಕ ದೇವದತ್ ಪಡಿಕಲ್ (63 ರನ್, 45 ಎಸೆತ, 6 ಬೌಂಡರಿ, 1 ಸಿಕ್ಸರ್) ಸಾಹಸದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ 13ನೇ ಆವೃತ್ತಿಯಲ್ಲಿ 3 ಗೆಲುವು ಕಂಡ ಮೊದಲ ತಂಡವೆನಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ 8 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ನಾಯಕ ವಿರಾಟ್ ಕೊಹ್ಲಿ (72*ರನ್, 53 ಎಸೆತ, 7 ಬೌಂಡರಿ, 2 ಸಿಕ್ಸರ್) ಬ್ಯಾಟಿಂಗ್ ಲಯ ಕಂಡುಕೊಂಡಿದ್ದು ಆರ್‌ಸಿಬಿಗೆ ಈ ಪಂದ್ಯದ ಗೆಲುವಿನೊಂದಿಗೆ ಸಿಕ್ಕ ಬೋನಸ್ ಎನಿಸಿತು.

ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದ ನಾಯಕ ಸ್ಟೀವನ್ ಸ್ಮಿತ್ ನಿರ್ಧಾರವನ್ನು ಸಮರ್ಥಿಸುವಂಥ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್ ತಂಡದಿಂದ ಬರಲಿಲ್ಲ. ಆರ್‌ಸಿಬಿ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿ ಎದುರು ರಾಯಲ್ಸ್ ತಂಡ 6 ವಿಕೆಟ್‌ಗೆ 154 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ ತಂಡ ದಿಟ್ಟ ಚೇಸಿಂಗ್ ನಡೆಸಿತು. ಆರಂಭಿಕ ಆರನ್ ಫಿಂಚ್ (8) ಅಲ್ಪಮೊತ್ತಕ್ಕೆ ನಿರ್ಗಮಿಸಿದರೂ, 20 ವರ್ಷದ ದೇವದತ್ ಪಡಿಕಲ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಆಸರೆಯಲ್ಲಿ ಮುನ್ನಡೆದ ಆರ್‌ಸಿಬಿ ತಂಡ 19.1 ಓವರ್‌ಗಳಲ್ಲಿ 2 ವಿಕೆಟ್‌ಗೆ 158 ರನ್ ಪೇರಿಸಿ ಗೆಲುವಿನ ದಡ ಸೇರಿತು.

ಕರೊನಾ ಕಾಲದಲ್ಲಿ ಆಡಿದ ಕಳೆದ 3 ಪಂದ್ಯಗಳಲ್ಲಿ (3, 1, 14) ಬ್ಯಾಟಿಂಗ್ ಲಯ ಕಂಡುಕೊಳ್ಳದೆ ನಿರಾಸೆ ಮೂಡಿಸಿದ್ದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿ ರನ್ ಬೇಟೆಗೆ ಚಾಲನೆ ನೀಡಿದರು. ಪಡಿಕಲ್-ಕೊಹ್ಲಿ ನಡುವೆ 2ನೇ ವಿಕೆಟ್‌ಗೆ 80 ಎಸೆತಗಳಲ್ಲಿ 99 ರನ್ ಜತೆಯಾಟ ಏರ್ಪಟ್ಟಾಗ ಆರ್‌ಸಿಬಿ ಗೆಲುವು ಖಚಿತವೆನಿಸಿತ್ತು. ಕೊನೆಯಲ್ಲಿ ಕೊಹ್ಲಿ, ಎಬಿ ಡಿವಿಲಿಯರ್ಸ್‌ (12*) ಜತೆಗೂಡಿ ಇನ್ನೂ 5 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

ರಾಯಲ್ಸ್‌ಗೆ ಚಾಹಲ್ ಕಡಿವಾಣ
ಅಗ್ರ ಕ್ರಮಾಂಕವನ್ನೇ ನೆಚ್ಚಿಕೊಂಡಿದ್ದ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವ ಮೂಲಕ ಆರ್‌ಸಿಬಿ ತಂಡ ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿಹಾಕಿತು. ನಾಯಕ ಸ್ಟೀವನ್ ಸ್ಮಿತ್ (5) ವಿಕೆಟ್ ಕಬಳಿಸುವ ಮೂಲಕ ಇಸುರು ಉದಾನ ಮೊದಲ ಆಘಾತ ನೀಡಿದರೆ, ಬಿರುಸಿನ ಆಟವಾಡುವ ಸೂಚನೆ ತೋರಿದ್ದ ಜೋಸ್ ಬಟ್ಲರ್ (22) ಮತ್ತೋರ್ವ ವೇಗಿ ನವದೀಪ್ ಸೈನಿ ಬಲೆಗೆ ಬಿದ್ದರು. ನಂತರ ಸ್ಪಿನ್ನರ್ ಯಜುವೇಂದ್ರ ಚಾಹಲ್ ರಾಯಲ್ಸ್ ತಂಡ ತಿರುಗೇಟು ನೀಡದಂತೆ ನೋಡಿಕೊಂಡರು. ರಿಟರ್ನ್ ಕ್ಯಾಚ್ ಮೂಲಕ ಸಂಜು ಸ್ಯಾಮ್ಸನ್ (4) ವಿಕೆಟ್ ಪಡೆದ ಚಾಹಲ್, ಕನ್ನಡಿಗ ರಾಬಿನ್ ಉತ್ತಪ್ಪಗೂ (17) ಡಗೌಟ್ ದಾರಿ ತೋರಿದರು. ಬಳಿಕ ಯುವ ಆಟಗಾರ ಮಹಿಪಾಲ್ ಲೊಮ್ರೊರ್ (47), ರಾಹುಲ್ ತೆವಾಟಿಯಾ (24*) ಮತ್ತು ಜೋಫ್ರಾ ಆರ್ಚರ್ (16*) ಪರಿಶ್ರಮದಿಂದ ರಾಯಲ್ಸ್ ಮೊತ್ತ 150ರ ಗಡಿ ದಾಟಿದರೂ, ಆರ್‌ಸಿಬಿಗೆ ಇದು ಸವಾಲಿನ ಗುರಿ ಎನಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net