

ನವದೆಹಲಿ: ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿಯಲ್ಲಿ ಆಡುತ್ತಿರುವ ಆಟಗಾರನೊಬ್ಬನಿಗೆ ಬುಕ್ಕಿಯಿಂದ ಫಿಕ್ಸಿಂಗ್ ಆಮಿಷ ಎದುರಾಗಿದೆ. ಆ ಆಟಗಾರ ಈ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದಿಂದ (ಎಸಿಯು) ತನಿಖೆ ಶುರುವಾಗಿದೆ. ಜತೆಗೆ ಎಸಿಯು ಮತ್ತಷ್ಟು ಅಲರ್ಟ್ ಆಗಿದೆ.
ಐಪಿಎಲ್ ಟೂರ್ನಿಯನ್ನು ಕರೊನಾ ವೈರಸ್ ಭೀತಿಯ ನಡುವೆ ಜೈವಿಕ ಸುರಕ್ಷಾ ವಾತಾವರಣದಲ್ಲಿ ಆಡಲಾಗುತ್ತಿದೆ. ಹೀಗಾಗಿ ಹೊರಗಿನ ವ್ಯಕ್ತಿಗಳು ಆಟಗಾರರನ್ನು ನೇರವಾಗಿ ಸಂಪರ್ಕಿಸುವುದು ಕಷ್ಟಕರವಾಗಿದೆ. ಇದರ ನಡುವೆಯೂ ಆನ್‌ಲೈನ್ ಮೂಲಕ ಆಟಗಾರರಿಗೆ ಆಮಿಷ ಒಡ್ಡುವ ಅಪಾಯ ಇದ್ದೇ ಇರುತ್ತದೆ.
ಆಟಗಾರನೊಬ್ಬ ಫಿಕ್ಸಿಂಗ್ ಆಮಿಷ ಬಂದಿರುವ ಬಗ್ಗೆ ಮಾಹಿತಿ ನೀಡಿರುವುದನ್ನು ಬಿಸಿಸಿಐ ಎಸಿಯು ಮುಖ್ಯಸ್ಥ ಅಜಿತ್ ಸಿಂಗ್ ಖಚಿತಪಡಿಸಿದ್ದಾರೆ. ‘ನಾವು ಆ ಬುಕ್ಕಿಯ ಬೆನ್ನುಹತ್ತಿದ್ದೇವೆ. ಶೀಘ್ರದಲ್ಲೇ ಆತನನ್ನು ಪತ್ತೆ ಹಚ್ಚುವೆವು’ ಎಂದು ಮಾಜಿ ಡಿಜಿಪಿ ಅಜಿತ್ ಸಿಂಗ್ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ನೀತಿಸಂಹಿತೆಯ ಪ್ರಕಾರ ಫಿಕ್ಸಿಂಗ್ ಆಮಿಷದ ಬಗ್ಗೆ ಮಾಹಿತಿ ನೀಡುವ ಆಟಗಾರ ಅಥವಾ ಆತನ ತಂಡದ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ.
ಹೆಚ್ಚಿನ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅಲ್ಲಿ ಅಭಿಮಾನಿಗಳ ರೀತಿಯಲ್ಲಿ ಮೊದಲಿಗೆ ಸಂಪರ್ಕ ಸಾಧಿಸುವ ಬುಕ್ಕಿಗಳು ಬಳಿಕ ಫಿಕ್ಸಿಂಗ್ ಆಮಿಷ ಒಡ್ಡುವ ಅಪಾಯ ಇದ್ದೇ ಇರುತ್ತದೆ ಎಂದು ಎಸಿಯು ಈ ಮೊದಲೇ ತಿಳಿಸಿತ್ತು. ಐಪಿಎಲ್‌ನಲ್ಲಿ ಆಡುತ್ತಿರುವ ಎಲ್ಲ ಆಟಗಾರರು ಈಗಾಗಲೆ ಭ್ರಷ್ಟಾಚಾರ ನಿಗ್ರಹ ತರಗತಿಗಳಿಗೆ ಹಾಜರಾಗಿ ಫಿಕ್ಸಿಂಗ್ ಅಪಾಯದ ಬಗ್ಗೆ ಸೂಕ್ತ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.
ಅಜಿತ್ ಸಿಂಗ್ ನೇತೃತ್ವದ ಬಿಸಿಸಿಐ-ಎಸಿಯು ಒಟ್ಟು 8 ಸದಸ್ಯರನ್ನು ಒಳಗೊಂಡಿದೆ. ಜತೆಗೆ ಯುಕೆ ಮೂಲದ ಸ್ಪೋರ್ಟ್‌ರಾಡರ್ ಕಂಪನಿಯ ನೆರವು ಪಡೆದುಕೊಳ್ಳಲಾಗಿದ್ದು, ಬೆಟ್ಟಿಂಗ್‌ನಲ್ಲಿ ಯಾವುದಾದರು ವಿಚಿತ್ರ ಜೂಜು ಕಂಡುಬಂದರೆ ಪತ್ತೆ ಹಚ್ಚಿ ಫಿಕ್ಸಿಂಗ್ ಭೀತಿಯ ಬಗ್ಗೆ ಮಾಹಿತಿ ಪಡೆಯಲು ಈ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.