ಅತಿಯಾದ ಆತ್ಮವಿಶ್ವಾಸವೇ ಕೆಲಸ ಕೆಡಲು ಕಾರಣವಾಯಿತು; ಭಾರತ ವಿರುದ್ಧದ ಸೋಲಿಗೆ ಪಾಕ್​ ಮಾಜಿ ನಾಯಕನ ಹೇಳಿಕೆ ವೈರಲ್​

Misbah Ul Haq
Published on

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್​ ಮುಗಿದು ಎರಡು ವಾರಗಳಾಗುತ್ತ ಬಂದರೂ ಪಾಕಿಸ್ತಾನ ಯಾಕೋ ಅದರ ಗುಂಗಿನಿಂದ ಇನ್ನೂ ಹೊರಬರುವಂತೆ ಕಾಣುತ್ತಿಲ್ಲ. ಈ ಬಾರಿಯ ಚುಟುಕು ವಿಶ್ವಸಮರದಲ್ಲಿ ಗೆದ್ದು ವಿಶ್ವಕ್ಕೆ ಹೊಸ ಸಂದೇಶ ರವಾನಿಸಬೇಕೆಂಬ ನಿಟ್ಟಿನಲ್ಲಿ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್​ ಶಿಶು ಯುಎಸ್​ಎ ಹಾಗೂ ಭಾರತದ ವಿರುದ್ಧ ಸೋಲುವ ಮೂಲಕ ಸೂಪರ್​ 08 ಹಂತ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿತ್ತು. ಈ ಕುರಿತು ಮಾತನಾಡಿರುವ ಮಾಜಿ ಆಟಗಾರ ಸೋಲಿನ ಕುರಿತು ಕಾರಣಗಳನ್ನು ತಿಳಿಸಿದ್ದಾರೆ.

ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ವಿಶ್ವಕಪ್​ನಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಪ್ರತಿಯೊಬ್ಬ ಆಟಗಾರನು ಹೇಳಿದ್ದನ್ನು. 2021ರಲ್ಲಿ ಸೆಮಿಫೈನಲ್​, 2022ರಲ್ಲಿ ಫೈನಲ್​ ಸೋತಿದ್ದೇವೆ. ಈ ಬಾರಿ ನಾವು ಕಪ್​ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ. ಈ ಬಾರಿ ಯಾವ ತಂಡ ನಮಗೆ ಪೈಫೋಟಿ ನೀಡಲು ಸಾಧ್ಯವಿಲ್ಲ ಎಂದು ಪಾಕ್​ ಆಟಗಾರರು ಹೇಳಿ ಸೋತ ಬಳಿಕ ಸುಮ್ಮನಾಗಿದ್ದರು. ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ನಾಯಕ ಮಿಸ್ಬಾ ಉಲ್​ ಹಕ್​ 17 ವರ್ಷಗಳ ಹಿಂದಿನ ಸೋಲಿನ ಕುರಿತು ಮಾತನಾಡಿದ್ಧಾರೆ.

ಸ್ಟಾರ್​ ಸ್ಪೋರ್ಟ್ಸ್​​ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಮಿಸ್ಬಾ ಉಲ್​ ಹಕ್​, 2007ರಲ್ಲಿ ನಡೆದ ಮೊದಲ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ನಾವು ಆರಾಮಾಗಿ ಗೆಲ್ಲಬಹುದಿತ್ತು. ಪೈನಲ್​ನಲ್ಲಿ ನಾವು ಭಾರತ ತಂಡವನ್ನು 157 ರನ್​ಗಳಿಗೆ ಕಟ್ಟಿ ಹಾಕಿದ್ದೆವು. ಸುಲಭ ಗುರಿಯನ್ನು ಉತ್ತಮ ಆರಂಭ ಪಡೆದರೆ ಆರಾಮಾಗಿ ಬೆನ್ನಟ್ಟಬಹುದು ಎಂದು ಭಾವಿಸಿದ್ದೆವು. ಆದರೆ, 2-3 ಓವರ್​ ಮುಗಿಯುವ ವೇಳೆಗೆ ವಿಕೆಟ್​ಗಳನ್ನು ಕಳೆದುಕೊಂಡೆವು. ಇದು ನಮ್ಮ ಮೇಲೆ ಒತ್ತಡ ಹೇರಲು ಶುರು ಮಾಡಿತ್ತು.

ದಕ್ಷಿಣ ಆಫ್ರಿಕಾದ ಪಿಚ್​ ಹಾಗೂ ಸಣ್ಣ ಬೌಂಡರಿಗಳನ್ನು ನೋಡಿ ನಾವು ಆರಾಮಾಗಿ ಗೆಲ್ಲುತ್ತೇವೆ ಎಂದು ಭಾವಿಸಿದ್ದೆವು. ನಾವು ಸ್ಪಿನ್​ ವಿರುದ್ಧ ಚೆನ್ನಾಗಿ ಆಡುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸವು ಫೈನಲ್​ನಲ್ಲಿ ನಮ್ಮ ಸೋಲಿಗೆ ಕಾರಣವಾಯಿತು. ಭಾರತದ ವಿರುದ್ಧ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಪಾಕಿಸ್ತಾನ ಮಾಜಿ ನಾಯಕ ಮಿಸ್ಬಾ ಉಲ್​ ಹಕ್​ 17 ವರ್ಷಗಳ ಬಳಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net