ಫ್ರೆಂಚ್ ಓಪನ್‌ನಲ್ಲಿ ಥೀಮ್, ಕೆರ್ಬರ್‌ಗೆ ಮೊದಲ ದಿನವೇ ಆಘಾತ

frnch web
Published on

6ಪ್ಯಾರಿಸ್: ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮೊದಲ ದಿನವೇ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದ್ದು, ಮಾಜಿ ವಿಶ್ವ ನಂ. 1 ಜರ್ಮನಿಯ ಏಂಜೆಲಿಕ್ ಕೆರ್ಬರ್ ಮತ್ತು 2 ಬಾರಿಯ ರನ್ನರ್‌ಅಪ್ ಡೊಮಿನಿಕ್ ಥೀಮ್ ಮೊದಲ ಸುತ್ತಿನಲ್ಲೇ ಆಘಾತ ಎದುರಿಸಿದ್ದಾರೆ. 2ನೇ ಶ್ರೇಯಾಂಕಿತ ಜಪಾನ್ ಆಟಗಾರ್ತಿ ನವೊಮಿ ಒಸಾಕಾ ಮತ್ತು ಜೆಕ್ ಗಣರಾಜ್ಯದ ತಾರೆ ಪೆಟ್ರಾ ಕ್ವಿಟೋವಾ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

4ನೇ ಶ್ರೇಯಾಂಕಿತ ಥೀಮ್ 5 ಸೆಟ್‌ಗಳ ಮ್ಯಾರಥಾನ್ ಕಾದಾಟದಲ್ಲಿ ಸ್ಪೇನ್‌ನ ಪ್ಯಾಬ್ಲೊ ಆಂಡುಜರ್ ವಿರುದ್ಧ 6-4, 7-5, 3-6, 4-6, 4-6ರಿಂದ ಆಘಾತ ಎದುರಿಸಿದರು. ಥೀಮ್ 2018, 2019ರಲ್ಲಿ ಫೈನಲ್‌ಗೇರಿ ನಡಾಲ್ ವಿರುದ್ಧ ಸೋತಿದ್ದರು.

26 ವರ್ಷದ ಒಸಾಕಾ ಭಾನುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರೊಮೇನಿಯಾದ ಪ್ಯಾಟ್ರಿಸಿಯಾ ಮರಿಯಾ ವಿರುದ್ಧ 6-4, 7-6 (4) ನೇರಸೆಟ್‌ಗಳಿಂದ ಜಯಿಸಿದರು. ಈ ಮೂಲಕ ಒಸಾಕ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ತಮ್ಮ ಗೆಲುವಿನ ಓಟವನ್ನು ಸತತ 15ನೇ ಪಂದ್ಯಕ್ಕೆ ವಿಸ್ತರಿಸಿದರು. ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ಆಡಿರದಿದ್ದ 4 ಗ್ರಾಂಡ್ ಸ್ಲಾಂಗಳ ಒಡತಿ ಒಸಾಕ, ಯುಎಸ್ ಓಪನ್ ಮತ್ತು ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಒಸಾಕ ಪ್ಯಾರಿಸ್‌ನಲ್ಲಿ ಹಿಂದೆಂದೂ ಮೂರನೇ ಸುತ್ತಿಗಿಂತ ಮೇಲೇರಿಲ್ಲ ಎಂಬುದು ಗಮನಾರ್ಹ.

11ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ 6-7, 7-6, 6-1ರಿಂದ ಬೆಲ್ಜಿಯಂನ ಗ್ರೀಟ್ ಮಿನ್ನೆನ್ ವಿರುದ್ಧ ಗೆದ್ದು 2ನೇ ಸುತ್ತಿಗೇರಿದರು. ಮೊದಲ ಸೆಟ್ ಸೋತು ಹಿನ್ನಡೆ ಎದುರಿಸಿದರೂ ಕುಗ್ಗದ 2 ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಶುಭಾರಂಭ ಕಂಡರು. ಅಮೆರಿಕದ ಡೇನಿಯಲ್ ಕಾಲಿನ್ಸ್ ಮತ್ತು ರಷ್ಯಾದ ಎಲೆನಾ ವೆಸ್ನಿನಾ ಮೊದಲ ದಿನ ಮುನ್ನಡೆ ಸಾಧಿಸಿದ ಮತ್ತಿಬ್ಬರು ಪ್ರಮುಖ ಆಟಗಾರ್ತಿಯರು.

ಮುಗ್ಗರಿಸಿದ ಕೆರ್ಬರ್

26ನೇ ಶ್ರೇಯಾಂಕಿತೆ ಏಂಜೆಲಿಕ್ ಕೆರ್ಬರ್ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಅರ್ಹತಾ ಆಟಗಾರ್ತಿ ಅನ್ಹೆಲಿನಾ ಕಲಿನಿನಾ ವಿರುದ್ಧ 2-6, 4-6ರಿಂದ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡರು. ಇತರ 3 ಗ್ರಾಂಡ್ ಸ್ಲಾಂಗಳಲ್ಲಿ ಪ್ರಶಸ್ತಿ ಜಯಿಸಿದ್ದರೂ, ಕ್ಲೇಕೋರ್ಟ್‌ನಲ್ಲಿ ಕೆರ್ಬರ್ ವೈಲ್ಯ ಮುಂದುವರಿದಿದೆ. ಪ್ಯಾರಿಸ್‌ನಲ್ಲಿ ಕಳೆದ 6 ವರ್ಷಗಳಲ್ಲಿ ಅವರು 5ನೇ ಬಾರಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ಒಸಾಕಗೆ ₹10 ಲಕ್ಷ ದಂಡ!

ಮಾನಸಿಕ ಆರೋಗ್ಯದ ನೆಪ ನೀಡಿ ಫ್ರೆಂಚ್ ಓಪನ್ ಟೂರ್ನಿಯ ಸುದ್ದಿಗೋಷ್ಠಿಗಳಿಂದ ಹೊರಗುಳಿಯಲು ನಿರ್ಧರಿಸಿರುವ ನವೊಮಿ ಒಸಾಕಗೆ ಸಂಘಟಕರು ಮೊದಲ ಸುತ್ತಿನ ಪಂದ್ಯದ ಬಳಿಕ 10.85 ಲಕ್ಷ ರೂ. ದಂಡ ವಿಧಿಸಿದ್ದಾರೆ. ಒಸಾಕ ಮುಂದೆಯೂ ಸುದ್ದಿಗೋಷ್ಠಿಗೆ ಹಾಜರಾಗದೆ ನಿಯಮಗಳನ್ನು ಮೀರಿದರೆ ಟೂರ್ನಿಯಿಂದಲೇ ಹೊರದಬ್ಬಲ್ಪಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net