

Virat Kohli: ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy) ಟೂರ್ನಿಯಲ್ಲಿ 12 ವರ್ಷಗಳ ಬಳಿಕ ಇಂದು ಡೆಲ್ಲಿ ತಂಡದ ಪರ ಅಖಾಡಕ್ಕಿಳಿದ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ದೇಶಿಯ ಕ್ರಿಕೆಟ್ನಲ್ಲಿಯೂ ತಮ್ಮ ಕಳಪೆ ಫಾರ್ಮ್ನ ಮುಂದುವರಿಸಿದ್ದಾರೆ. ಇದು ಸ್ಟೇಡಿಯಂನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ತಮ್ಮ ನೆಚ್ಚಿನ ಕ್ರಿಕೆಟಿಗ ಮೈದಾನದಲ್ಲಿ ಅಬ್ಬರಿಸುವುದನ್ನು ನೋಡಲು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸೇರಿದ್ದ ಕೊಹ್ಲಿ ಫ್ಯಾನ್ಸ್ಗಳಿಗೆ ಅವರ ವಿಕೆಟ್ ಪತನವಾಗಿದ್ದು, ಭಾರೀ ಬೇಸರ ಉಂಟುಮಾಡಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಮತ್ತು ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ 12 ವರ್ಷಗಳ ಬಳಿಕ ವಿರಾಟ್ ಅಖಾಡಕ್ಕಿಳಿಯುತ್ತಿರುವ ಸಂಗತಿ ತಿಳಿದ ಅವರ ಅಭಿಮಾನಿಗಳು, ಬರೋಬ್ಬರಿ 15,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಡಿಯಂ ಆವರಿಸಿಕೊಂಡಿದ್ದರು. ಆದರೆ, ವಿರಾಟ್ ಕೇವಲ ಆರು ರನ್ಗೆ ಬೋಲ್ಡ್ ಔಟ್ ಆಗಿದ್ದು ಅಭಿಮಾನಿಗಳ ಕಾತರತೆ, ನಿರೀಕ್ಷೆಗಳನ್ನು ಹುಸಿ ಮಾಡಿತು. ಇನ್ನು ಮುಂದುವರೆದ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಇತ್ತ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ ಕೊಹ್ಲಿಯನ್ನು ಮೆಚ್ಚಿ ಮಾತನಾಡಿದ್ದಾರೆ.
“ವಿರಾಟ್ ಕ್ರಿಕೆಟ್‌ನ ಅತಿದೊಡ್ಡ ಶಕ್ತಿ. ಏಕಾಂಗಿಯಾಗಿ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಶಕ್ತಿ ಅವರಿಗಿದೆ. ಮುಂಬೈ, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಿದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ರನ್ನು ನೋಡಲು ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿಲ್ಲ. ಆಡಿದ ಅಷ್ಟು ಪಂದ್ಯಗಳಲ್ಲಿಯೂ ಅದು ಸಾಧ್ಯವಾಗಲಿಲ್ಲ, ಆದರೆ, ಕೇವಲ ಮೊದಲ ಪಂದ್ಯದಲ್ಲೇ ವಿರಾಟ್ ಸಹಸ್ರಾರು ಸಂಖ್ಯೆಯಲ್ಲಿ ತಮ್ಮ ಅಭಿಮಾನಿಗಳನ್ನು ಸ್ಟೇಡಿಯಂಗೆ ಕರೆಸಿದ್ದಾರೆ. ಇವರಾರಿಂದಲೂ ಆಗದ ಕೆಲಸ ವಿರಾಟ್ರಿಂದ ಆಗಿರುವುದು ಶ್ಲಾಘನೀಯ" ಎಂದರು.
"ಈ ಬಾರಿ ವಿರಾಟ್ ಆಫ್ ಸ್ಟಂಪ್ ಹೊರಗೆ ಔಟ್ ಆಗಲಿಲ್ಲ. ಬದಲಿಗೆ ಬೋಲ್ಡ್ ಆಗಿ ಪೆವಿಲಿಯನ್ ಹಿಡಿದರು" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ,(ಏಜೆನ್ಸೀಸ್).