ಸೆಹ್ವಾಗ್​ '300' ದಾಖಲೆ ಮುರಿಯಲು ಈತನಿಂದ ಮಾತ್ರ ಸಾಧ್ಯ! ಕೈಫ್​ ಹೆಸರಿಸಿದ ಆ ಸ್ಟಾರ್​ ಬ್ಯಾಟರ್​ ಯಾರು? | Virender Sehwag

ವಿಜಯವಾಣಿ (29)
Published on

Virender Sehwag: ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್​ ನಡುವಿನ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಶುಭಮನ್ ಗಿಲ್​ ಸ್ಫೋಟಕ ಇನ್ನಿಂಗ್ಸ್ ನೀಡಿದರೆ, ಆರಂಭಿಕ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​, ಭರ್ಜರಿ ಶತಕದಾಟ ತೋರಿದ್ದಾರೆ. ಇದು ಅವರ ಮೇಲಿರುವ ವಿಶ್ವಾಸವನ್ನು ದುಪ್ಟಟ್ಟು ಮಾಡಿದೆ.

23 ವರ್ಷದ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಜೈಸ್ವಾಲ್​, ಇದುವರೆಗೆ 25 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದೊಂದು ಫಾರ್ಮೆಟ್​ನಲ್ಲೇ 7 ಶತಕ ಮತ್ತು 12 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಒಟ್ಟಾರೆ 2200ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ. ವಿಶೇಷವಾಗಿ, ಗಳಿಸಿರುವ ಏಳು ಶತಕಗಳಲ್ಲಿ, ಐದು ಶತಕಗಳು 150 ಅಥವಾ ಅದಕ್ಕಿಂತ ಹೆಚ್ಚಿನ ಇನ್ನಿಂಗ್ಸ್‌ಗಳಾಗಿವೆ. ಗಮನಾರ್ಹವಾಗಿ, ಅವರ ಮೊದಲ ನಾಲ್ಕು ಶತಕಗಳು ಪ್ರತಿಯೊಂದೂ 150 ರನ್‌ ಗಡಿ ದಾಟಿದ್ದು, ಗ್ರೇಮ್ ಸ್ಮಿತ್ ನಂತರ ಈ ಅಪರೂಪದ ಮೈಲಿಗಲ್ಲು ಸಾಧಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಯಶಸ್ವಿ, 150ರ ಗಡಿದಾಟುವಲ್ಲಿ ವಿಫಲರಾದರು. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ, ಜೈಸ್ವಾಲ್ 175 ರನ್‌ಗಳಿಗೆ ಔಟಾಗುವ ಮೂಲಕ ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿದ್ದಾರೆ. ಯಶಸ್ವಿ ಅವರ ಸ್ಫೋಟಕ ಬ್ಯಾಟಿಂಗ್​ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಪ್ರತಿಕ್ರಿಯಿಸಿ, ವೀರೇಂದ್ರ ಸೆಹ್ವಾಗ್ ಅವರ ತ್ರಿಶತಕ ದಾಖಲೆಯನ್ನು ಮುರಿಯುವ ಆಟಗಾರ ಯಶಸ್ವಿ ಜೈಸ್ವಾಲ್​. ತಮ್ಮ ವೃತ್ತಿಜೀವನದಲ್ಲಿ 2 ತ್ರಿಶತಕಗಳನ್ನು ಗಳಿಸಿರುವ ಸೆಹ್ವಾಗ್​, 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಸಿಡಿಸಿದರು. ಇದು ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ.

"ಯಶಸ್ವಿ ಜೈಸ್ವಾಲ್ ಶತಕಗಳನ್ನು ಗಳಿಸುವ ಮತ್ತು ಹೊಸ ದಾಖಲೆಯನ್ನು ಬರೆಯುವ ತಾಳ್ಮೆ ಹೊಂದಿರುವ ಬ್ಯಾಟ್ಸ್‌ಮನ್. ಮೊದಲ 26 ಪಂದ್ಯಗಳಲ್ಲಿ, ಅವರ ಸಂಖ್ಯೆಗಳು ಸಚಿನ್ ಮತ್ತು ವಿರಾಟ್ ಅವರಂತೆಯೇ ಉತ್ತಮವಾಗಿವೆ. ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ರನ್​ ಗಳಿಸುವ ಮೂಲಕ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸೆಹ್ವಾಗ್ ಅವರ 300 ರನ್​ ದಾಖಲೆಯನ್ನು ಮುರಿಯಲು ಜೈಸ್ವಾಲ್​ರಿಂದ ಸಾಧ್ಯ" ಎಂದು ಕೈಫ್​ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net